ನವದೆಹಲಿ, ಫೆ.13 (DaijiworldNews/PY): ರಕ್ಷಣಾ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು, ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆ, ಪಾಂಗಾಂಗ್ ಸರೋವರ ಪ್ರದೇಶಕ್ಕೆ ಭೇಟಿ ನೀಡಲು ತೀರ್ಮಾನಿಸಿವೆ ಎಂದು ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಮೇ ತಿಂಗಳ ಕೊನೆಯ ವಾರ ಅಥವಾ ಜೂನ್ ವೇಳೆಗೆ ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ಜುಯೆಲ್ ಓರಮ್ ಅಧ್ಯಕ್ಷತೆಯ 30 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯು ಗಡಿ ಪ್ರದೇಶಕ್ಕೆ ಭೇಟಿ ನೀಡಲು ಇಚ್ಛಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡಾ ಈ ಸಮಿತಿಯ ಸದ್ಯರಲ್ಲಿ ಓರ್ವರು.
ಕಳೆದ ವಾರ ನಡೆದ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ, ಆ ಸಭೆಗೆ ರಾಹುಲ್ ಗಾಂಧಿ ಗೈರಾಗಿದ್ದರು ಎಂದು ಮೂಲಗಳು ತಿಳಿಸಿವೆ. ಎಲ್ಎಸಿ ಪ್ರದೇಶಕ್ಕೆ ಸಮಿತಿಯು ಭೇಟಿ ನೀಡಬೇಕಿದ್ದರೆ ಸರ್ಕಾರದ ಅನುಮತಿ ಪಡೆಯುವುದು ಅಗತ್ಯವಾಗಿದೆ.
ಸುಮಾರು ಒಂಭತ್ತು ತಿಂಗಳ ಮುಖಾಮುಖಿಯ ನಂತರ ಭಾರತ ಹಾಗೂ ಚೀನಾ ಪಡೆಗಳು ಪಾಂಗಾಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ಭಾಗಗಳ ಮುಂಚೂಣಿ ನೆಲೆಯಿಂದ ಸೇನೆಯನ್ನು ಹಿಂತೆಗೆಯುವ ವಿಚಾರಕ್ಕೆ ಸಂಬಂಧಪಟ್ಟಂತೆ ಒಮ್ಮತಕ್ಕೆ ಬಂದಿವೆ.
ಗುರುವಾರ ಸಂಸತ್ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಮುಂಚೂಣಿ ನೆಲೆಗಳಿಂದ ಸೇನೆಯನ್ನು ಹಿಂಪಡೆಯುವ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಿದ್ದರು.
ಭಾರತ ಹಾಗೂ ಚೀನಾದ ಒಪ್ಪಂದದ ಪ್ರಕಾರ, ಪಾಂಗಾಂಗ್ ಸರೋವರದ ಉತ್ತರ ದಂಡೆಯ ಫಿಂಗರ್ 8 ಪ್ರದೇಶದಿಂದ ಚೀನಾವು ಸೈನ್ಯವನ್ನು ಹಿಂತೆಗೆಯಬೇಕಿದೆ. ತಮ್ಮ ಖಾಯಂ ನೆಲೆಯಾದ ಫಿಂಗರ್ 3 ಪ್ರದೇಶದಲ್ಲಿರುವ ಧನ್ ಸಿಂಗ್ ಥಾಪಾ ಪೋಸ್ಟ್ನಲ್ಲಿ ಭಾರತೀಯ ಸೇನಾ ಸಿಬ್ಬಂದಿಗಳು ನೆಲೆಸಿದ್ದಾರೆ.