ನವದೆಹಲಿ, ಫೆ.12 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಸುಳ್ಳು ಮಾಹಿತಿ ನೀಡಿವೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿದ್ದು, ಶೇ 97ರಷ್ಟು ಟ್ವಿಟರ್ ಖಾತೆ ಮತ್ತು ಪೋಸ್ಟ್ಗಳನ್ನು ಟ್ವಿಟರ್ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ಟ್ವಿಟರ್ ಪ್ರತಿನಿಧಿಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ನಡುವೆ ಬುಧವಾರ ಸಭೆ ನಡೆದಿದ್ದ ವೇಳೆ ಭಾರತೀಯ ಕಾನೂನಿಗೆ ಟ್ವಿಟರ್ ಬದ್ಧವಾಗಿರುವುದು ಕಡ್ಡಾಯ. ಇಲ್ಲದಿದ್ದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಚಿವಾಲಯ ಎಚ್ಚರಿಕೆ ನೀಡಿತ್ತು.
ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಉಂಟುಮಾಡುವ ಪ್ರಚೋದನಕಾರಿ ವಿಷಯವನ್ನು ನಿರ್ಬಂಧಿಸಲು ಟ್ವಿಟರ್ ಏಕೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಸಚಿವಾಲಯ ಪ್ರಶ್ನಿಸಿದ್ದು, ಇದೇ ರೀತಿಯ ಘಟನೆ ಅಮೇರಿಕಾದ ಕ್ಯಾಪಿಟಲ್ ಹಿಲ್ನಲ್ಲಿ ನಡೆದಾಗ ಕಂಪನಿಯ ಧೋರಣೆಯೇ ಭಿನ್ನವಾಗಿತ್ತು" ಎಂದು ತಿಳಿಸಿದೆ.
ಇನ್ನು ಈ ಸಂಬಂಧ ಟ್ವಿಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.