ಮೈಸೂರು, ಫೆ.12 (DaijiworldNews/PY): "ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕರ್ನಾಟಕದ ಟ್ರಂಪ್. ಅಮೇರಿಕಾದಲ್ಲಿನ ಟ್ರಂಪಾಯಣದಂತೆ ಕರ್ನಾಟಕದಲ್ಲಿ ಸಿದ್ದರಾಮಾಯಣ ನಡೆಯುತ್ತಿದೆ" ಎಂದು ಎಂಎಲ್ಸಿ ಹೆಚ್. ವಿಶ್ವನಾಥ್ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರ ಡೊನಾಲ್ಡ್ ಟ್ರಂಪ್ ಅವರಿದ್ದಂತೆ. ಅಮೇರಿಕಾದಲ್ಲಿನ ಟ್ರಂಪಾಯಣದಂತೆ ಕರ್ನಾಟಕದಲ್ಲಿ ಸಿದ್ದರಾಮಾಯಣ ನಡೆಯುತ್ತಿದೆ. ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋಲು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಅದೇ ರೀತಿ ಸಿದ್ದರಾಮಯ್ಯ ಕೂಡಾ ಸೋಲೊಪ್ಪಿಕೊಳ್ಳಲು ಸಿದ್ದರಿಲ್ಲ" ಎಂದರು.
"ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ಸಿದ್ದಾಂತ, ಸಂಸ್ಕೃತಿಯ ಬಗ್ಗೆಯೇ ತಿಳಿದಿಲ್ಲ. ನಾವು ಅವರನ್ನು ಕಾಂಗ್ರೆಸ್ಹೆ ಕರೆದುಕೊಂಡು ಬಂದ ಕಾರಣ ಅವರು ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಅದೃಷ್ಟದಿಂದ ಸಿಎಂ ಆದವರು. ಅವರ ಯಾರ ಯಶಸ್ಸನ್ನು ಕೂಡಾ ಸಹಿಸುವುದಿಲ್ಲ. ತಮ್ಮದೇ ಸಮುದಾಯದ ಸ್ವಾಮೀಜಿಯವರ ಹೋರಾಟವನ್ನೇ ಅವರು ಸಹಿಸುವುದಿಲ್ಲ. ಅವರಿಗೆ ಸ್ವಾರ್ಥ ಬಿಟ್ಟರೆ ಬೇರೇನೂ ತಿಳಿದಿಲ್ಲ" ಎಂದು ಹೇಳಿದರು.
"ಸಿದ್ದರಾಮಯ್ಯ ಅವರು ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರನ್ನು ನೋಡಿದಾಗ ಸಿದ್ದರಾಮಯ್ಯ ಅವರಿಗೆ ಸಿಎಂ ಎನ್ನುವ ಮಿಠಾಯಿ ನೆನಪಾಗುತ್ತದೆ. ಹಾಗೂ ಮಿಠಾಯಿ ಪಡೆಯಬೇಕೆನ್ನುವ ಚಡಪಡಿಕೆ ಅವರಿಗೆ. ಹಾಗಾಗಿ ಅವರು ಆಗಾಗ ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡುತ್ತಾರೆ" ಎಂದು ವಾಗ್ದಾಳಿ ನಡೆಸಿದರು.
ಅಹಿಂದ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಇದು ಯಾವುದೇ ಅಹಿಂದ ಹೋರಾಟವಲ್ಲ. ಸಿದ್ದರಾಮಯ್ಯ ಹಾಗೂ ಮಹಾದೇವಪ್ಪನವರ ಸ್ವಾರ್ಥದ ಹೋರಾಟವಿದು. ಸಿದ್ದರಾಮಯ್ಯ ಅವರು ಸ್ವಾರ್ಥಕ್ಕಾಗಿ ಹಿಂದ, ಅಹಿಂದ ಎಂದು ಚಡಪಡಿಸುತ್ತಿದ್ದಾರೆ" ಎಂದರು.