ಬೆಳಗಾವಿ,ಫೆ.12 (DaijiworldNews/HR): "ಕಾಂಗ್ರೆಸ್ ಪಕ್ಷ ಅಹಿಂದ ಪರವಾಗಿಯೇ ಇರುವುದರಿಂದ, ಪ್ರತ್ಯೇಕವಾಗಿ ಅಹಿಂದ ಹೋರಾಟದ ಅಗತ್ಯವಿಲ್ಲ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಎಲ್ಲ ಸಮುದಾಯದವರನ್ನೂ ಒಳಗೊಂಡಿರುವ ಪಕ್ಷವಾಗಿದ್ದು, ಸಮಾವೇಶ ನಡೆಸಿ ಮತ್ತೆ ಸಂಘಟಿಸುವ ಅವಶ್ಯವಿಲ್ಲ" ಎಂದರು.
"ವಿವಿಧ ಸಮುದಾಯಗಳ ಮೀಸಲಾತಿ ಆಗ್ರಹದ ಹೋರಾಟದಲ್ಲಿ ರಾಜಕೀಯವೂ ನಡೆಯುತ್ತಿದೆ ಮತ್ತು ಷಡ್ಯಂತ್ರವೂ ಇದೆ. ಅರ್ಹವಾಗಿ ಮೀಸಲಾತಿ ಸಿಗಬೇಕಾದ ಸಮುದಾಯಗಳಿಗೆ ತೊಂದರೆ ಕೊಡಲಾಗುತ್ತಿದೆ" ಎಂದು ದೂರಿದ್ದಾರೆ.
ಇನ್ನು "ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಯ ಕೇಳಿದ್ದಾರೆ. ಅವರ ನಿರ್ಣಯಕ್ಕಾಗಿ ಕಾಯುತ್ತೇವೆ. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಿರ್ಣಯಿಸುತ್ತೇವೆ" ಎಂದು ತಿಳಿಸಿದ್ದಾರೆ.