ಮುಂಬೈ, ಫೆ.12 (DaijiworldNews/HR): ರಾಜಸ್ಥಾನ ಸರ್ಕಾರವು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ವಿರುದ್ಧ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಜೋಧಪುರ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಲ್ಮಾನ್ ಖಾನ್, "ನನ್ನ ಎಲ್ಲ ಅಭಿಮಾನಿಗಳಿಗೆ, ನಿಮ್ಮ ಪ್ರೀತಿಯ ಬೆಂಬಲ ಮತ್ತು ಕಾಳಜಿಗೆ ಧನ್ಯವಾದಗಳು. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ. ದೇವರು ನಿಮ್ಮನ್ನು ಸಹ ಆಶೀರ್ವದಿಸುತ್ತಾನೆ" ಎಂದು ಬರೆದುಕೊಂಡಿದ್ದಾರೆ.
ಇನ್ನು 1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಸಿನಿಮಾ ಶೂಟಿಂಗ್ ಸಮಯದಲ್ಲಿ ಜೋಧಪುರ್ ಬಳಿಯ ಕಂಕಣಿ ಗ್ರಾಮದಲ್ಲಿ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯಾಡಿದ್ದು, ಬೇಟೆಯಾಡಲು ಪರವಾನಗಿ ಇಲ್ಲದ ಬಂದೂಕು ಬಳಕೆ ಮಾಡಲಾಗಿತ್ತು. ಅಕ್ರಮ ಶಸ್ತ್ರಾಸ್ತ್ರ ಬಳಕೆ ಮಾಡಿರುವ ಸಂಬಂಧ ಸಲ್ಮಾನ್ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.
ವಿಡಿಯೊ ಕಾನ್ಫರೆನ್ಸ್ ಮೂಲಕ ಸಲ್ಮಾನ್ ಖಾನ್ ವಿಚಾರಣೆಗೆ ಹಾಜರಾಗಿದ್ದು, ನ್ಯಾಯಾಧೀಶ ರಾಘವೇಂದ್ರ ಕಚ್ವಾಲ್ ನೇತೃತ್ವದ ಪೀಠ ವಿಚಾರಣೆ ನಡೆಸಿ, ಸಲ್ಮಾನ್ ಖಾನ್ ಅವರನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.