ಗದಗ, ಫೆ.12 (DaijiworldNews/PY): "ನಮ್ಮ ಸರ್ಕಾರ ಡಕೋಟಾ ಎಕ್ಸ್ಪ್ರೆಸ್ ಸರ್ಕಾರವಲ್ಲ. ನಮ್ಮದು ಜನಪರ ಹಾಗೂ ಅಭಿವೃದ್ದಿ ಪರ ಸರ್ಕಾರ. ಸಿಎಂ ಆಗುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ಆರೋಪ ಮಾಡುತ್ತಿದ್ದಾರೆ" ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಟಾಂಗ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ಹೇಳುವ ಹಾಗೇ ನಮ್ಮದು ಡಕೋಟಾ ಎಕ್ಸ್ಪ್ರೆಸ್ ಸರ್ಕಾರವಲ್ಲ. ಕೊರೊನಾ ಕಾರಣದಿಂದ ಅಭಿವೃದ್ದಿ ಕಾರ್ಯಗಳು ಆಗಿಲ್ಲ. ಸಿದ್ದರಾಮಯ್ಯ ಅವರಿಗೆ ಸಿಎಂ ಕುರ್ಚಿ ಮಾತ್ರವೇ ಕಾಣಿಸುತ್ತಿದೆ. ಆದರೆ, ನಮ್ಮ ಸರ್ಕಾರ ಜನರಿಗೆ ಒಳ್ಳೆಯದಾಗಬೇಕು ಎನ್ನುವ ಹಿತದೃಷ್ಟಿಯ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ"ಎಂದು ಹೇಳಿದರು.
"ಸಿಎಂ ಸ್ಥಾನಕ್ಕೆ ಹಾರಬೇಕು ಎಂದರೆ ಆರೋಪ ಮಾಡಬೇಕಲ್ಲವೇ?. ಹಾಗಾಗಿ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಗೆದ್ದರೆ ಸಾಕು, ನಾನು ಸಿಎಂ ಆಗುತ್ತೇನೆ ಎಂದು ಹೇಳುತ್ತಿದ್ದಾರೆ. ಸಿಎಂ ಗಾದಿಗಾಗಿ ಸಿದ್ದರಾಮಯ್ಯ ಸೇರಿದಂತೆ ಡಿ.ಕೆ.ಶಿವಕುಮಾರ್ ಹಾಗೂ ಜಿ.ಪರಮೇಶ್ವರ್ ಅವರ ನಡುವೆ ಫೈಟ್ ಇದೆ. ಮೊದಲು ಪಕ್ಷದಲ್ಲೇ ಸರಿಯಿಲ್ಲ" ಎಂದರು.
"ಈಶ್ವರಪ್ಪ ಎಸ್ಟಿ ಹೋರಾಕ್ಕೆ ಆರ್ಎಸ್ಎಸ್ ಬೆಂಬಲವಿದೆ ಎಂದು ಕೈ ನಾಯಕರು ಆರೋಪಿಸಿದ್ದಾರೆ. ಜಾತಿ, ಪಂಗಡ ವಿಚಾರಕ್ಕೆ ಆರ್ಎಸ್ಎಸ್ ಕೈಹಾಕಲ್ಲ ಬದಲಾಗಿ ದೇಶದ ಐಕ್ಯತೆಗೆ ಹೋರಾಡುತ್ತದೆ" ಎಂದು ಹೇಳಿದರು.