ಬೆಂಗಳೂರು, ಫೆ.12 (DaijiworldNews/PY): ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿನಂದನೆ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆಗಳು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ಅನುಭವ ಮತ್ತು ವಾಕ್ಪಟುತ್ವದ ಮೂಲಕ ಯಶಸ್ವಿಯಾಗಿ ನಿರ್ವಹಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಇಲ್ಲಿಯೂ ತನ್ನ ಛಾಪು ಮೂಡಿಸುತ್ತಾರೆ ಎಂಬ ಭರವಸೆ ಇದೆ" ಎಂದಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ನಿರ್ಗಮಿಸಿದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ನೇಮಕ ಮಾಡಲಾಗಿದೆ.
ಈ ಬಗ್ಗೆ ರಾಜ್ಯಸಭೆಯ ಸಭಾಪತಿಗೆ ಕಾಂಗ್ರೆಸ್ ಹೈಕಮಾಂಡ್ ಪತ್ರ ಬರೆದಿದೆ. ಗುಲಾಂ ನಬಿ ಆಜಾದ್ ಅವರು ಸೇರಿದಂತೆ ನಾಲ್ವರು ರಾಜ್ಯಸಭಾ ಸದಸ್ಯರು ನಿವೃತ್ತರಾಗುತ್ತಿದ್ದಾರೆ.
ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡಿದ ಗುಲಾಂ ನಬಿ ಆಜಾದ್, "ಪಾಕಿಸ್ತಾನಕ್ಕೆ ತೆರಳದ ಅದೃಷ್ಟವಂತರ ಪೈಕಿ ನಾನೂ ಒಬ್ಬ. ಪಾಕ್ನಲ್ಲಿನ ಪರಿಸ್ಥಿತಿಗಳ ವಿಚಾರದ ಬಗ್ಗೆ ಓದಿದಾಗ, ನಾನೊರ್ವ ಹಿಂದೂಸ್ತಾನಿ ಮುಸ್ಲಿಮನಾಗಿರುವುದಕ್ಕೆ ಹೆಮ್ಮೆಯಿದೆ" ಎಂದಿದ್ದರು.
"ನನಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಜನತೆಯ ಪ್ರೀತಿ ದೊರೆತಿದೆ" ಎಂದು ಹೇಳಿದ್ದರು.