ನವದೆಹಲಿ, ಫೆ.12 (DaijiworldNews/PY): "ಚೀನಾಕ್ಕೆ ಭಾರತದ ಪ್ರದೇಶವನ್ನು ಯಾರು ನೀಡಿದ್ದು ಎನ್ನುವುದನ್ನು ರಾಹುಲ್ ಗಾಂಧಿ ಅವರ ಅಜ್ಜನ ಬಳಿ ಕೇಳಬೇಕು" ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿದ್ದಾರೆ.
ಭಾರತ-ಚೀನಾ ಬಗ್ಗೆ ರಾಹುಲ್ ಗಾಂಧಿ ನೀಡಿದ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಯಾರು ದೇಶ ಭಕ್ತರು ಯಾರು ದೇಶಭಕ್ತರಲ್ಲ ಎನ್ನುವುದು ಜನರಿಗೆ ತಿಳಿದಿದೆ. ಜವಾಹರ್ ಲಾಲ್ ನೆಹರು ಅವರೊಂದಿಗೆ ಕೇಳಿದರೆ ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಕೊಟ್ಟವರು ಯಾರು ಎನ್ನುವ ಉತ್ತರ ರಾಹುಲ್ ಗಾಂಧಿ ಅವರಿಗೆ ಸಿಗಲಿದೆ" ಎಂದಿದ್ದಾರೆ.
ಈ ಸಂದರ್ಭ ಮಾತನಾಡಿದ ಇನ್ನೋರ್ವ ಕೇಂದ್ರ ಸಚಿವ ಆರ್ ಕೆ ಸಿಂಗ್ ಅವರು, "ಭಾರತದ ಮೇಲೆ ದಾಳಿ ಮಾಡಿದರೆ ಪ್ರತಿ ದಾಳಿ ನಡೆಸುತ್ತದೆ ಎನ್ನುವುದನ್ನು ಬಿಜೆಪಿ ನೇತೃತ್ವದ ಸರ್ಕಾರ ನೆರೆ ದೇಶಗಳಿಗೆ ತೋರಿಸಿಕೊಟ್ಟಿದ್ದು, ಅದನ್ನು ಜಗತ್ತು ನೋಡಿದೆ" ಎಂದು ತಿಳಿಸಿದ್ದಾರೆ.
ರಾಹುಲ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ರಾಹುಲ್ ಗಾಂಧಿ ಅವರ ಹೇಳಿಕೆ ಅಪಕ್ವವಾದದ್ದು, ಅವರಿಗೆ ಯಾವ ವಿಚಾರವೂ ಅರ್ಥವಾಗುವುದಿಲ್ಲ. ಅಲ್ಲದೇ, ಅವರು ಅರ್ಥ ಮಾಡಿಕೊಳ್ಳುದಕ್ಕೂ ಕೂಡಾ ಪ್ರಯತ್ನ ಪಡುವುದಿಲ್ಲ" ಎಂದು ಲೇವಡಿ ಮಾಡಿದ್ದಾರೆ.