ನವದೆಹಲಿ, ಫೆ.12 (DaijiworldNews/HR): "ಪ್ರಧಾನಿ ಮೋದಿ ಚೀನಿಯರ ಮುಂದೆ ನಿಲ್ಲಲಾಗದ ಒಬ್ಬ ಹೇಡಿ" ಎಂದು ಲಡಾಖ್ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಪಕ್ಷದ ದೆಹಲಿಯ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ "ನಮ್ಮ ಸೈನ್ಯದ ತ್ಯಾಗದ ಮೇಲೆ ಉಗುಳುತ್ತಿದ್ದಾರೆ. ಅವರು ನಮ್ಮ ಸೈನ್ಯದ ತ್ಯಾಗಕ್ಕೆ ದ್ರೋಹ ಮಾಡುತ್ತಿದ್ದಾರೆ. ಭಾರತದಲ್ಲಿ ಈ ರೀತಿ ಮಾಡಲು ಯಾರಿಗೂ ಅವಕಾಶ ನೀಡಬಾರದು" ಎಂದರು.
ಇನ್ನು ಗುರುವಾರ ಸಂಸತ್ತಿನಲ್ಲಿ ಪೂರ್ವ ಲಡಾಕ್ನಲ್ಲಿನ ಪರಿಸ್ಥಿತಿ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, "ಈಗ, ನಮ್ಮ ಸೈನ್ಯವು ಫಿಂಗರ್ 3 ನಲ್ಲಿ ಬೀಡುಬಿಟ್ಟಿದ್ದು, ಫಿಂಗರ್ 4 ನಮ್ಮ ಪ್ರದೇಶವಾಗಿದೆ. ಈಗ ನಾವು ಫಿಂಗರ್ 4 ರಿಂದ ಫಿಂಗರ್ 3ಕ್ಕೆ ಸ್ಥಳಾಂತರಗೊಂಡಿದ್ದೇವೆ. ಪ್ರಧಾನಿ ಮೋದಿ ನಮ್ಮ ಪ್ರದೇಶವನ್ನು ಚೀನಿಯರಿಗೆ ಏಕೆ ಬಿಟ್ಟುಕೊಟ್ಟಿದ್ದಾರೆ? " ಎಂದು ಪ್ರಶ್ನಿಸಿದ್ದಾರೆ.