ನವದೆಹಲಿ, ಫೆ.12 (DaijiworldNews/PY): ಕಾಂಗ್ರೆಸ್ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ನಿರ್ಗಮಿಸಿದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ರಾಜ್ಯಸಭೆಯ ಸಭಾಪತಿಗೆ ಕಾಂಗ್ರೆಸ್ ಹೈಕಮಾಂಡ್ ಪತ್ರ ಬರೆದಿದೆ. ಗುಲಾಂ ನಬಿ ಆಜಾದ್ ಅವರು ಸೇರಿದಂತೆ ನಾಲ್ವರು ರಾಜ್ಯಸಭಾ ಸದಸ್ಯರು ನಿವೃತ್ತರಾಗುತ್ತಿದ್ದಾರೆ.
ರಾಜ್ಯಸಭೆಯಲ್ಲಿ ಇತ್ತೀಚೆಗೆ ನಿವೃತ್ತರಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ ವಿದಾಯ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಅವರು, ಗುಲಾಂ ನಬಿ ಆಜಾದ್ ಅವರ ಬಗ್ಗೆ ಪ್ರಸ್ತಾಪಿಸುವ ವೇಳೆ ಭಾವುಕರಾಗಿದ್ದರು. ಆಜಾದ್ ಅವರ ಕೊಡುಗೆಯನ್ನು ಪ್ರಧಾನಿ ಮೋದಿ ಅವರ ಶ್ಲಾಘಿಸಿದ್ದರು.
ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡಿದ ಗುಲಾಂ ನಬಿ ಆಜಾದ್, "ಪಾಕಿಸ್ತಾನಕ್ಕೆ ತೆರಳದ ಅದೃಷ್ಟವಂತರ ಪೈಕಿ ನಾನೂ ಒಬ್ಬ. ಪಾಕ್ನಲ್ಲಿನ ಪರಿಸ್ಥಿತಿಗಳ ವಿಚಾರದ ಬಗ್ಗೆ ಓದಿದಾಗ, ನಾನೋರ್ವ ಹಿಂದೂಸ್ತಾನಿ ಮುಸ್ಲಿಮನಾಗಿರುವುದಕ್ಕೆ ಹೆಮ್ಮೆಯಿದೆ" ಎಂದಿದ್ದರು.
"ನನಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಜನತೆಯ ಪ್ರೀತಿ ದೊರೆತಿದೆ" ಎಂದು ಹೇಳಿದ್ದರು.