ಹೊಸದಿಲ್ಲಿ, ಫೆ.12 (DaijiworldNews/HR): "ದಲಿತರು ಕ್ರೈಸ್ತ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದಲ್ಲಿ ಅಂತವರಿಗೆ ಇನ್ನು ಯಾವುದೇ ಮೀಸಲಾತಿ ಸೌಲಭ್ಯ ಇರುವುದಿಲ್ಲ" ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಈ ಕುರಿತು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ಮತಾಂತರ ಹೊಂದಿದ ದಲಿತರು, ಮೀಸಲು ಕ್ಷೇತ್ರದಿಂದ ಲೋಕಸಭೆ ಅಥವಾ ವಿಧಾನ ಸಭೆಗೆ ಸ್ಪರ್ಧಿಸಲು ಅವಕಾಶವಿಲ್ಲ ಹಾಗೂ ಯಾವುದೇ ಮೀಸಲಾತಿ ಸೌಲಭ್ಯಗಳನ್ನು ಪಡೆಯುವಂತಿಲ್ಲ" ಎಂದರು.
ಇನ್ನು "ಸಂವಿಧಾನದ ಆದೇಶದ ಪ್ಯಾರಾ 3ರ ಪ್ರಕಾರ ಹಿಂದೂ, ಸಿಕ್ಖ್ ಅಥವಾ ಬೌದ್ಧ ಧರ್ಮ ಹೊರತುಪಡಿಸಿ ಇತರ ಧರ್ಮವನ್ನು ಒಪ್ಪಿಕೊಳ್ಳುವವರು ಪರಿಶಿಷ್ಟ ಜಾತಿ ಸದಸ್ಯ ಎನಿಸಿಕೊಳ್ಳುವುದಿಲ್ಲ" ಎಂದು ಹೇಳಿದರು.
"ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುವ ದಲಿತರು ಹಾಗೂ ಹಿಂದೂ, ಸಿಕ್ಖ್ ಹಾಗೂ ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವ ದಲಿತರ ನಡುವೆ ವ್ಯತ್ಯಾಸವಿದೆ" ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.