ನಾಗಪುರ, ಫೆ.12 (DaijiworldNews/PY): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ದ ರೈತರು ನಡೆಸುತ್ತಿರುವ ಬೃಹತ್ ರೈತ ಪ್ರತಿಭಟನೆ ಹಾಗೂ ರೈತ ಮಹಾಸಭೆಗಳು ದೇಶದ ಇತರ ಭಾಗಗಳಿಗೂ ವಿಸ್ತರಣೆಯಾಗುವ ಲಕ್ಷಣಗಳು ಕಾಣುತ್ತಿವೆ.
"ಫೆ.20ರಂದು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ರಾಕೇಶ್ ಟಿಕಾಯತ್ ಅವರು ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ರೈತ ಮಹಾಸಭೆ ನಡೆಸುತ್ತಿದ್ದು, ಈ ಸಂದರ್ಭ ಸಾರ್ವಜನಿಕ ರ್ಯಾಲಿಯನ್ನು ಕೂಡಾ ಆಯೋಜಿಸಲಾಗಿದೆ" ಎಂದು ಮೋರ್ಚಾದ ಮಹಾರಾಷ್ಟ್ರ ರಾಜ್ಯದ ಸಂಯೋಜಕ ಸಂದೀಪ್ ಗಿಡ್ಡೆ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
"ರಾಕೇಶ್ ಟಿಕಾಯತ್ ಅವರು, ದೇಶದಲ್ಲೇ ಅತೀ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿರುವ ಯಾವತ್ಮಲ್ ಜಿಲ್ಲೆಯಿಂದ ರೈತ ಮಹಾಸಭೆಯನ್ನು ಪ್ರಾರಂಭಿಸುತ್ತಿದ್ದು, ಈ ಸಭೆಯಲ್ಲಿ ಹಾಗೂ ರ್ಯಾಲಿಯಲ್ಲಿ ರಾಕೇಶ್ ಟಿಕಾಯತ್ ಜೊತೆ ಮುಖಂಡ ಯದುವೀರ್ ಸಿಂಗ್ ಹಾಗೂ ಎಸ್ಕೆಎಂ ಒಕ್ಕೂಟದ ಕೆಲ ನಾಯಕರು ಭಾಗವಹಿಸಲಿದ್ದಾರೆ" ಎಂದು ಹೇಳಿದ್ದಾರೆ.
ಈ ರೈತ ಮಹಾಸಭೆಗೆ ವಿದರ್ಭಾ ಹಾಗೂ ಮಹಾರಾಷ್ಟ್ರದ ಕೆಲ ಭಾಗಗಳಿಂದ ಆಗಮಿಸುತ್ತಿದ್ದು, ಈ ಮಹಾಸಭೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಂದ ರ್ಯಾಲಿ ಕೈಗೊಳ್ಳಲು ಅನುಮತಿ ಪಡೆಯಲಾಗುತ್ತಿದೆ. ರೈತ ಸಂಘಟನೆಗಳು ಪ್ರತಿಭಟನೆಗಾಗಿ ಅನುಮತಿ ಕೇಳಿರುವ ಬಗ್ಗೆ ಯಾವತ್ಮಲ್ ಜಿಲ್ಲೆಯ ಪೊಲೀಸ್ ಅಧಿಕಾರಿಯೋರ್ವರು ಖಚಿತಪಡಿಸಿದ್ದಾರೆ.