ನವದೆಹಲಿ, ಫೆ.12 (DaijiworldNews/PY): "ಭಾರತ್ ಬಯೋಟೆಕ್ ಅಭಿವೃದ್ದಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ತಡೆಹಿಡಿಯಬೇಕು" ಎಂದು ಕೇಂದ್ರ ಸರ್ಕಾರವನ್ನು ಛತ್ತೀಸ್ಗಢ ಸರ್ಕಾರ ಆಗ್ರಹಿಸಿದೆ.
ಈ ಬಗ್ಗೆ ಟ್ವೀಟ್ ಮೂಲಕ ಪತ್ರ ಬರೆದಿರುವ ಆರೋಗ್ಯ ಸಚಿವ ಟಿ.ಎಸ್.ಸಿಂಗ್ದೇವ್ ಅವರು, "ಮೂರನೇ ಹಂತದ ಪರೀಕ್ಷೆಯಲ್ಲಿ ಲಸಿಕೆಯು ಅಪೂರ್ಣವಾಗಿರುವ ಕಾರಣ ಹಾಗೂ ಲಸಿಕೆಯ ಅವಧಿ ಪೂರ್ಣಗೊಳ್ಳುವ ವಿಚಾರದ ಬಗ್ಗೆ ಮಾಹಿತಿ ಇಲ್ಲದೇ ಇರುವುದರಿಂದ ಲಸಿಕೆಯನ್ನು ವಿರೋಧಿಸಲಾಗುತ್ತಿದೆ. ಈ ಸಮಸ್ಯೆಗಳು ಬಗೆಹರಿಯುವ ತನಕ ರಾಜ್ಯಕ್ಕೆ ಕೋವ್ಯಾಕ್ಸಿನ್ ಪೂರೈಕೆಯನ್ನು ನಿಲ್ಲಿಸಬೇಕು" ಎಂದು ತಿಳಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು, "ಲಸಿಕೆ ನೀಡುವುದರಲ್ಲಿ ರಾಜ್ಯ ಹಿಂದಿರುವುದು ಆತಂಕಕಾರಿ ಸಂಗತಿ. ರಾಜ್ಯಕ್ಕೆ ಪೂರೈಕೆಯಾಗುತ್ತಿರುವ ಕೊರೊನಾ ಲಸಿಕೆ ಸುರಕ್ಷಿತ ಹಾಗೂ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಂತದ್ದು" ಎಂದಿದ್ದಾರೆ.
ಮೂರನೇ ಹಂತದ ಪರೀಕ್ಷೆ ಪೂರ್ಣವಾಗುವ ಮುನ್ನವೇ ಔಷಧ ನಿಯಂತ್ರಕರು ಲಸಿಕೆಯ ಬಳಕೆಗೆ ಅನುಮೋದಿಸಿದ್ದರು.