ಉತ್ತರಾಖಂಡ, ಫೆ.12 (DaijiworldNews/PY): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದ ಪರಿಣಾಮ ಸಂಭವಿಸಿರುವ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗಾಗಿ ಶುಕ್ರವಾರ ಆರನೇ ದಿನ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಪ್ರಮಾಹದಿಂದ ಇಲ್ಲಿಯವರೆಗೆ 36 ಮಂದಿ ಸಾವನ್ನಪ್ಪಿದ್ದು, 204ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಧೌಲಿ ಗಂಗಾ ನದಿ ನೀರಿ ಮಟ್ಟ ಹೆಚ್ಚಾದ ಕಾರಣ ಗುರುವಾರ ತಪೋವನ ಸುರಂಗದಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಈ ಹಿನ್ನೆಲೆ ಸುರಂಗದೊಳಗೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಪಡೆ ಸಿಬ್ಬಂದಿಗಳು ಹೊರಕ್ಕೆ ಬಂದಿದ್ದು, ಸುರಂಗದೊಳಗೆ ಕೆಸರು ಹಾಗೂ ಅವಶೇಷ ತೆಗೆಯುತ್ತಿದ್ದ ಭಾರೀ ಯಂತ್ರಗಳನ್ನು ಸಹ ಹೊರತೆಗೆಯಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿದ್ದ ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ವಾತಿ ಎಸ್. ಭಡಾರಿಯಾ, "ಮುಂಜಾಗ್ರತಾ ಕ್ರಮದ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ" ಎಂದಿದ್ದರು.