ನವದೆಹಲಿ, ಫೆ.12 (DaijiworldNews/PY): "ನೂತನ ಕೃಷಿ ಕಾಯ್ದೆಗಳನ್ನು ರೈತರ ಹಿತದೃಷ್ಟಿಯಿಂದಲೇ ರೂಪಿಸಲಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಭೆಯ ಬಳಿಕ ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರೈತರ ಹಿತದೃಷ್ಟಿಯಿಂದ ನೂತನ ಕೃಷಿ ಕಾಯ್ದೆಗಳನ್ನು ರೂಪಿಸಲಾಗಿದೆ. ಬದಲಾಗಿ ಅವರ ವಿರುದ್ದವಲ್ಲ. ಮೂರು ಕೃಷಿ ಕಾನೂನುಗಳನ್ನು ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳೊಂದಿಗೆ ಸಭೆ ನಡೆಸಲು ಮುಂದಾಗುವ ಮುಖಾಂತರ ಕೇಂದ್ರ ಸರ್ಕಾರವು ಸೂಕ್ತವಾದ ಮಾರ್ಗವನ್ನು ಆಯ್ಕೆ ಮಾಡಿದೆ" ಎಂದಿದ್ದಾರೆ.
"ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ದೆಹಲಿಯ ಗಡಿ ಪ್ರದೇಶಗಳಲ್ಲಿ ರೈತರು ಎರಡು ತಿಂಗಳಿಗೂ ಹೆಚ್ಚು ಸಮಯದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಈ ಸಮಸ್ಯೆ ಶೀಘ್ರವೇ ನಿವಾರಣೆಯಾಗಲಿದೆ" ಎಂದು ತಿಳಿಸಿದ್ದಾರೆ.
ನ.16ರಂದು ಜನತಾದಳ ಅಧ್ಯಕ್ಷ ನಿತೀಶ್ ಕುಮಾರ್ ಅವರು ಬಿಹಾರ ಸಿಎಂ ಆಗಿ ನಾಲ್ಕನೇ ಬಾರಿಗೆ ಅಧಿಕಾರ ಸ್ವೀಕರಿಸಿದ್ದರು. ಇದಾದ ಬಳಿಕ ಪ್ರಧಾನಿ ಮೋದಿ ಜೊತೆ ನಿತೀಶ್ ಕುಮಾರ್ ಅವರು ನಡೆಸಿದೆ ಮೊದಲ ಸಭೆ ಇದಾಗಿದೆ.
"ಈ ಸಭೆಯು ಸೌಜನ್ಯದ ಸಭೆಯಾಗಿದೆ. ಈ ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆಯ ವಿಚಾರದ ಬಗ್ಗೆ ಮಾತುಕತೆ ನಡೆಸಿಲ್ಲ" ಎಂದು ಹೇಳಿದ್ದಾರೆ.