ಚೆನ್ನೈ, ಫೆ.12 (DaijiworldNews/PY): "ಕೇಂದ್ರ ಪೊಲೀಸ್ ಪಡೆಗಳು, ತಮಿಳುನಾಡು ಸೇರಿದಂತೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ, ನ್ಯಾಯಯುತವಾದ ಮತದಾನ ನಡೆಸಲು ಹಾಗೂ ಯಾರೂ ಕೂಡಾ ಅನಗತ್ಯವಾದ ಲಾಭವನ್ನು ಪಡೆದುಕೊಳ್ಳದಂತೆ ನೋಡಿಕೊಳ್ಳುವ ಕೆಲಸದಲ್ಲಿ ಹೆಚ್ಚಿನ ಪಾತ್ರವಹಿಸುತ್ತವೆ" ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಆರೋರಾ ಹೇಳಿದ್ದಾರೆ.
"ಈ ಹಿಂದೆ ಮತದಾರರಿಗೆ ಆಮಿಷವೊಡ್ಡಿದ ಆರೋಪಗಳು ಕೇಳಿಬಂದ ನಿಟ್ಟಿನಲ್ಲಿ, ತಮಿಳುನಾಡು ವಿಧಾನಸಭೆಗೆ ಪ್ರಚೋದನೆ ಮುಕ್ತ ಹಾಗೂ ನ್ಯಾಯಯುತವಾದ ಚುನಾವಣೆಯನ್ನು ಕೈಗೊಳ್ಳಲು ಹಲವು ಕ್ರಮಗಳನ್ನು ಆಲೋಚಿಸಲಾಗಿದ್ದು, ಈ ಸಂದರ್ಭ ಇಬ್ಬರು ವಿಶೇಷ ವೀಕ್ಷಕರನ್ನು ನಿಯೋಜನೆ ಮಾಡಲಾಗಿದೆ" ಎಂದಿದ್ದಾರೆ.
ವಿಧಾನಸಭಾ ಚುನಾವಣೆಯ ಜೊತೆಗೆ ಕನ್ಯಾಕುಮಾರಿ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ಕೂಡಾ ನಡೆಯಲಿದೆ.
ಎಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಕೇರಳ ಸೇರಿದಂತೆ ಅಸ್ಸಾಂ, ತಮಿಳುನಾಡು, ಪಶ್ಚಿಮಬಂಗಾಳ ಹಾಗೂ ನೆರೆಯ ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.