ನವದೆಹಲಿ, ಫೆ. 11 (DaijiworldNews/SM): ದೇಶದಲ್ಲಿ ಕೊರೋನಾ ಆತಂಕದ ಪರಿಸ್ಥಿತಿ ಎದುರಾದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿಚಾರ ಹಿನ್ನೆಲೆಗೆ ಸರಿದಿತ್ತು. ಆದರೆ, ಇದೀಗ ಮತ್ತೆ ಸುದ್ದಿಯಲ್ಲಿದೆ. ದೇಶದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಮುಗಿದ ತಕ್ಷಣ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ(ಸಿಎಎ) ಜಾರಿಗೊಳಿಸಲಾಗುವುದೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ದೇಶದ ಜನತೆಗೆ ಪೌರತ್ವ ನೀಡುತ್ತೇವೆ ಎಂದು ತಿಳಿಸಿದ್ದಾರೆ. "ಸಿಎಎಗೆ ಮುಸ್ಲಿಮರ ಪೌರತ್ವ ಕಸಿದುಕೊಳ್ಳುವ ಯಾವುದೇ ನಿಬಂಧನೆ ಇಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದಿದ್ದಾರೆ. ಕಳೆದ 70 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಜನರಿಗೆ ಪೌರತ್ವ ನೀಡಲು ನಾವು ಬಯಸುತ್ತೇವೆ. ಯಾವುದೇ ತಪ್ಪು ಸಂದೇಶಗಳು ವದಂತಿಗಳಿಗೆ ಕಿವಿಗೊಡದಿರಿ" ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಅಲ್ಪಸಂಖ್ಯಾತರ ದಾರಿ ತಪ್ಪಿಸುತ್ತಿವೆ ಎಂದು ಅವರು ಆರೋಪ ಮಾಡಿದ್ದಾರೆ.