ನವದೆಹಲಿ, ಫೆ.11 (DaijiworldNews/PY): "ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದ್ದು, ಶ್ರೀಮಂತರಿಗೋಸ್ಕರ, ಶ್ರೀಮಂತರು ಮಂಡಿಸಿದ ಶ್ರೀಮಂತ ಬಜೆಟ್" ಎಂದು ಕಾಂಗ್ರೆಸ್ ಮುಖಂಡ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಬಜೆಟ್ ಬಗ್ಗೆ ಮಾತನಾಡಿದ ಅವರು, "ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಅಸಮರ್ಥವಾಗಿದೆ" ಎಂದಿದ್ದಾರೆ.
"ಒಟ್ಟು ಹೆಚ್ಚುವರಿ ಬಂಡವಾಳದ ಮೊತ್ತ 51 ಸಾವಿರ ಕೋಟಿ ರೂ. ಎಂದು ತೋರಿಸಲಾಗಿದೆ. ಹಾಗಾದಲ್ಲಿ, ಉಳಿದ ಹಣ ಎಲ್ಲಿ?" ಎಂದು ಕೇಳಿದ್ದಾರೆ.
"ಆರ್ಥಿಕತೆ ಕುಸಿಯುತ್ತಿದೆ ಎನ್ನುವುದನ್ನು ಸರ್ಕಾರವು ನಿರಾಕರಿಸುತ್ತಿದ್ದು, ಆರ್ಥಿಕ ಕ್ಷೇತ್ರದ ಸಮಸ್ಯೆ ಸ್ಥಿರವಾದುದಲ್ಲ, ಚಲನಶೀಲವಾದುದು ಎಂದು ಭಾವಿಸಿದೆ. ಕೊರೊನಾ ಸ್ಥಿತಿಯ ಆರಂಭಕ್ಕೂ ಮುನ್ನ ಮೊದಲ ಎರಡು ವರ್ಷದಲ್ಲೇ ಆರ್ಥಿಕ ಕುಸಿತ ಪ್ರಾರಂಭವಾಗಿತ್ತು" ಎಂದಿದ್ದಾರೆ.
"ಮೂರು ವರ್ಷ ಅಸಮರ್ಥ ಆರ್ಥಿಕ ನಿರ್ವಹಣೆಯನ್ನು ದೇಶ ಗಮನಿಸಿದೆ. ಹಣಕಾಸು ಸಚಿವ ಅಸಮರ್ಥ ಪದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ, ಸಂಸತ್ತಿನಲ್ಲಿ ನಾನು ಈ ಪದಕ್ಕಿಂದ ತೀಕ್ಷ್ಣವಾದ ಪದವನ್ನು ಬಳಸುವುದಿಲ್ಲ" ಎಂದು ಹೇಳಿದ್ದಾರೆ.
"ಅಭಿವೃದ್ದಿ ಸಾಲಿನಲ್ಲಿ ತಮಿಳುನಾಡು ಸೇರಿದಂತೆ ದೇಶದ ಬಹುತೇಕ ಭಾಗದಲ್ಲಿ ಬೇಡಿಕೆ ಕಾಣಿಸುತ್ತಿಲ್ಲ. ಉಳಿದಂತೆ ಬಿಹಾರ, ಉತ್ತರಪ್ರದೇಶ, ಒಡಿಶಾ ರಾಜ್ಯಗಳಲ್ಲಿನ ಸ್ಥಿತಿ ಒಬ್ಬರ ಊಹೆಗೆ ಬಿಟ್ಟಿದ್ದಾಗಿದೆ. ದೇಶವನ್ನು ಕಡೆಗಣಿಸಬೇಡಿ. ಈ ಬಜೆಟ್ ಯಾರಿಗಾಗಿ?. 2021ನೇ ಹಣಕಾಸು ವರ್ಷದ ಕೊನೆಗೆ ನಿರೀಕ್ಷಿತವಾದ ಅಭಿವೃದ್ದಿಯಾಗುವುದು ಅಸಾಧ್ಯ" ಎಂದಿದ್ದಾರೆ.