ನವದೆಹಲಿ, ಫೆ.11(DaijiworldNews/HR): "ಕೃಷಿ ಕಾಯ್ದೆಯನ್ನು ಪ್ರತಿಷ್ಠೆಯ ವಿಷಯ ಎಂದು ಪರಿಗಣಿಸದೆ ತನ್ನ ಹಟವನ್ನು ಬಿಟ್ಟು, ಆದಷ್ಟು ಬೇಗ ರದ್ದುಗೊಳಿಸಬೇಕು" ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಗೆ ತನ್ನ ಮೈತ್ರಿ ಪಕ್ಷಗಳಾದ ಅಕಾಲಿದಳ ಮತ್ತು ಆರ್ಎಲ್ಪಿಯನ್ನು ಕೃಷಿ ಕಾನೂನು ವಿಷಯದಲ್ಲಿ ಮನವೊಲಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಈ ಕಾನೂನುಗಳನ್ನು ರೈತರು ಒಪ್ಪಿಕೊಳ್ಳಬೇಕು ಎಂದು ಬಿಜೆಪಿ ಹೇಗೆ ನಿರೀಕ್ಷಿಸಲು ಸಾಧ್ಯ?" ಎಂಬುದಾಗಿ ಪ್ರಶ್ನಿಸಿದ್ದಾರೆ.
ಇನ್ನು "ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ರೈತರು ಮತ್ತು ರಾಜ್ಯಗಳೊಂದಿಗೆ ಚರ್ಚಿಸಿ ಹೊಸ ಕಾನೂನುಗಳನ್ನು ತರಬೇಕು. ಸರ್ಕಾರ ತರುವ ಕಾನೂನುಗಳಲ್ಲಿ ರೈತರೂ ಭಾಗಿಯಾಗಬೇಕು. ಅದನ್ನು ಅವರ ಮೇಲೆ ಬಲವಂತವಾಗಿ ಹೇರಬಾರದು" ಎಂದು ಹೇಳಿದ್ದಾರೆ.