ಮುಂಬೈ, ಫೆ.11 (DaijiworldNews/PY): "ನನಗೆ ಇವಿಎಂ ಮೇಲೆ ಸಂಪೂರ್ಣವಾದ ನಂಬಿಕೆ ಇದೆ" ಎಂದು ಮಹಾರಾಷ್ಟ್ರ ಸಿಎಂ ಅಜಿತ್ ಪವಾರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಇವಿಎಂಗಳನ್ನು ಬಳಸಿ ಚುನಾವಣೆಗಳನ್ನು ನಡೆಸಲಾದ ರಾಜಸ್ಥಾನ ಹಾಗೂ ಪಂಜಾಬ್ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಒಂದುವೇಳೆ ಚುನಾವಣೆಯಲ್ಲಿ ಗೆಲವು ಸಾಧಿಸಿದರೆ ಎಲ್ಲವೂ ಕೂಡಾ ಉತ್ತಮವಾಗಿರುತ್ತದೆ. ಚುನಾವಣೆಯಲ್ಲಿ ಸೋಲಾದ ತಕ್ಷಣವೇ ಇವಿಎಂಗಳನ್ನು ದೂರುತ್ತಾರೆ. ಆದರೆ, ನನಗೆ ಇವಿಎಂಗಳ ಮೇಲೆ ಸಂಪೂರ್ಣವಾದ ನಂಬಿಕೆ ಇದೆ" ಎಂದಿದ್ದಾರೆ.
"ಬ್ಯಾಲೆಟ್ ಪತ್ರಗಳ ಬಳಕೆಗೆ ಕಾಂಗ್ರೆಸ್ ಪ್ರಸ್ತಾಪಿಸಿದರೆ, ಚರ್ಚೆ ನಡೆಸಬಹುದು" ಎಂದು ಹೇಳಿದ್ದಾರೆ.
"ಚುನಾವಣೆಯ ಸಂದರ್ಭ ಇವಿಎಂಗಳ ಬದಲು ಬ್ಯಾಲೆಟ್ ಪೇಪರ್ಗಳನ್ನು ಬಳಸುವ ಆಯ್ಕೆಯನ್ನು ಮತದಾರರಿಗೆ ನೀಡುವ ಕಾನೂನು ರಚಿಸಬೇಕು" ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಮುಖ್ಯಸ್ಥರಾಗಿ ಇತ್ತೀಚೆಗೆ ನೇಮಕವಾಗಿರುವ ನಾನಾ ಪಟೋಲೆ ತಿಳಿಸಿದ್ದರು.
"ಚುನಾವಣೆಗಳಲ್ಲಿ ಇವಿಎಂಗಳ ಬದಲಾಗಿ ಬ್ಯಾಲೆಟ್ ಪೇಪರ್ಗಳನ್ನು ಬಳಸಬೇಕು" ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿರುವ ವೇಳೆ ಅಜಿತ್ ಪವಾರ್ ಈ ಹೇಳಿಕೆಯನ್ನು ನೀಡಿದ್ದಾರೆ.