ಚಂಡಿಗಢ, ಫೆ.11 (DaijiworldNews/MB) : 18 ವರ್ಷಕ್ಕಿಂತ ಕಡಿಮೆ ವಯಸ್ಸಿದ್ದರೂ ಪ್ರೌಢಾವಸ್ಥೆ ತಲುಪಿದ ಮುಸ್ಲಿಂ ಹೆಣ್ಣು ಮಕ್ಕಳು ತಮ್ಮ ಇಚ್ಛೆಯಂತೆ ಯಾರನ್ನಾದರೂ ವಿವಾಹವಾಗಬಹುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
36 ವರ್ಷದ ವ್ಯಕ್ತಿಯನ್ನು 17 ವರ್ಷದ ಬಾಲಕಿ ಮುಸ್ಲಿಂ ವಿಧಿಯ ಪ್ರಕಾರ ವಿವಾಹವಾಗಿದ್ದು ಇದಕ್ಕೆ ಬಾಲಕಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ದಂಪತಿ ಜೀವ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲ್ಕಾ ಸರಿನ್ ಅವರು ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ಪ್ರೌಢಾವಸ್ಥೆಯೆಂಬುದು 15 ವರ್ಷಕ್ಕೆ ಮೇಲ್ಪಟ್ಟವರಾದ ಕಾರಣ ಮುಸ್ಲಿಂ ಹೆಣ್ಣು ಮಕ್ಕಳು ತಮ್ಮ ಇಚ್ಛೆಯಂತೆ ಯಾರನ್ನೂ ಬೇಕಾದರೂ ವಿವಾಹವಾಗಬಹುದು ಎಂದು ಹೇಳಿದ್ದಾರೆ.
ಮುಸ್ಲಿಂ ವೈಯಕ್ತಿಕ ಕಾನೂನು 195ನೇ ವಿಧಿ ಉಲ್ಲೇಖನದ ಅನ್ವಯ ಮತ್ತು ನ್ಯಾಯಾಲಯಗಳ ವಿವಿಧ ತೀರ್ಪುಗಳ ಆಧಾರದ ಮೇಲೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.