ನವದೆಹಲಿ, ಫೆ.11 (DaijiworldNews/PY): "ಮುಂದಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಅವರ ವಿಕಾಸ್ ಮಾದರಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ವಿನಾಶ ಮಾದರಿ ನಡುವೆ ಸ್ಪರ್ಧೆಯಾಗಿರಲಿದೆ" ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ಬಂಗಾಳದಲ್ಲಿ ಪರಿವರ್ತನ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಮಮತಾ ಬ್ಯಾನರ್ಜಿ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವು ಸಂಪೂರ್ಣ ವಿಫಲವಾಗಿದೆ" ಎಂದರು.
"ಜನರ ಕಲ್ಯಾಣಕ್ಕಾಗಿ ಮೋದಿ ಸರ್ಕಾರ ಕೆಲಸ ಮಾಡುತ್ತಿದ್ದರೆ, ಮಮತಾ ಬ್ಯಾನರ್ಜಿ ಸೋದರಳಿಯ ಕಲ್ಯಾಣಕ್ಕಾಗಿ ಚಿಂತಿಸುತ್ತಾರೆ" ಎಂದು ತಿಳಿಸಿದರು.
"ಮುಂದಿನ ಚುನಾವಣೆಯಲ್ಲಿ ಕೇವಲ ಸಿಎಂ, ಶಾಸಕ ಅಥವಾ ಸಚಿವರನ್ನು ಬದಲಾವಣೆ ಮಾಡುವುದು ಮಾತ್ರವಲ್ಲ. ಒಳನುಸುಳುವಿಕೆ ಹಾಗೂ ಪಶ್ಚಿಮ ಬಂಗಾಳದ ಪರಿಸ್ಥಿತಿಯನ್ನು ಕೂಡಾ ಸಂಪೂರ್ಣವಾಗಿ ಬದಲಾವಣೆ ಮಾಡಬೇಕಿದೆ" ಎಂದು ಹೇಳಿದರು.
"ನೀವು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗಾಗಿ ಮಾತ್ರ ಮತ ಹಾಕಿದರೆ, ಅಕ್ರಮ ವಲಸಿಗರನ್ನು ಮಾತ್ರವಲ್ಲದೇ, ರಾಜ್ಯಕ್ಕೆ ಒಂದು ಪಕ್ಷವನ್ನು ಕೂಡಾ ಪ್ರವೇಶಿಸಲು ಬಿಡುವುದಿಲ್ಲ" ಎಂದರು.
ಬಿಜೆಪಿ ಕಾರ್ಯಕರ್ತರ ರಾಜಕೀಯ ಹತ್ಯೆಯನ್ನು ಖಂಡಿಸಿದ ಶಾ, "ಆರೋಪಿಗಳನ್ನು ಜೈಲಿಗಟ್ಟಲಾಗುವುದು. ಟಿಎಂಸಿ ಗೂಂಡಾಗಳನ್ನು ಎದುರಿಸಲು ನಾವು ಸಿದ್ದ" ಎಂದು ತಿಳಿಸಿದರು.
"ಬಿಜೆಪಿ ಕಾರ್ಯಕರ್ತರು ಟಿಎಂಸಿ ಗೂಂಡಾಗಳಿಂದ ಭಯಪಡುತ್ತಿದ್ದಾರೆ ಎಂದುಕೊಂಡಿದ್ದೀರಾ?. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದ ಕೂಡಾ ತಡೆಯಲು ಸಾಧ್ಯವಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈದ ಪ್ರತಿಯೋರ್ವ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗುವುದು" ಎಂದರು.
"ಮಮತಾ ಬ್ಯಾನರ್ಜಿ ಅವರು ಜೈಶ್ರೀರಾಮ್ ಘೋಷಣೆ ಕೇಳಿದಾಗ ಕೋಪಗೊಳ್ಳುತ್ತಾರೆ. ಆದರೆ, ಚುನಾವಣೆ ಮುಗಿಯುವ ವೇಳೆಗ ಮಮತಾ ಅವರೇ ಜೈಶ್ರೀರಾಮ್ ಮಂತ್ರ ಜಪಿಸಲು ಶುರು ಮಾಡುತ್ತಾರೆ" ಎಂದು ಲೇವಡಿ ಮಾಡಿದರು.