ಮುಂಬೈ, ಫೆ.11(DaijiworldNews/HR): ಮಹಾರಾಷ್ಟ್ರ ರಾಜ್ಯ ಸರ್ಕಾರದ ವಿಮಾನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಡೆಹ್ರಾಡೂನ್ಗೆ ಪ್ರಯಾಣಿಸಬೇಕಾಗಿತ್ತು. ಆದರೆ ಅವರಿಗೆ ಸರ್ಕಾರಿ ವಿಮಾನದಲ್ಲಿ ಪ್ರಯಾಣಿಸಲು ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.
ನಿರಾಕರಣೆಯ ಹಿನ್ನೆಲೆಯಲ್ಲಿ ಕೋಶಿಯಾರಿ ಅವರು ವಾಣಿಜ್ಯ ಬಳಕೆಯ ವಿಮಾನದ ಮೂಲಕ ಡೆಹ್ರಾಡೂನ್ಗೆ ತೆರಳಿದ್ದಾರೆ ಎನ್ನಲಾಗಿದೆ.
ಗುರುವಾರ ಬೆಳಿಗ್ಗೆ 10 ಗಂಟೆಗೆ ಕೋಶಿಯಾರಿ ಮುಂಬೈನಿಂದ ಡೆಹ್ರಾಡೂನ್ಗೆ ತೆರಳಬೇಕಾಗಿದ್ದು, ಬಳಿಕ ಅಲ್ಲಿಂದ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಮಸ್ಸೂರಿಗೆ ಹೋಗಬೇಕಾಗಿತ್ತು ಎಂದು ವರದಿಯಾಗಿದೆ.
ಇನ್ನು ರಾಜ್ಯ ಸರ್ಕಾರದ ವಿಮಾನವನ್ನು ಮುಂಚಿತವಾಗಿಯೇ ಬುಕ್ ಮಾಡಲಾಗಿತ್ತು. ಆದರೆ ಕೊನೆಯ ಕ್ಷಣದವರೆಗೆ ಇದಕ್ಕೆ ಅನುಮತಿ ಸಿಕ್ಕಿರಲಿಲ್ಲ. ಸಾಮಾನ್ಯವಾಗಿ ರಾಜ್ಯಪಾಲರು ಅನುಮತಿಗಾಗಿ ಕಾಯುವುದಿಲ್ಲ. ಆದರೆ ಇಂದು ರಾಜ್ಯಪಾಲರು ವಿಮಾನದಲ್ಲಿ ಕುಳಿತಾಗ, ಪೈಲಟ್, ನಿಮ್ಮ ಪ್ರಯಾಣಕ್ಕೆ ಅನುಮತಿ ಸಿಕ್ಕಿಲ್ಲ ಎಂಬುದಾಗಿ ಹೇಳಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.