ನವದೆಹಲಿ, ಫೆ.11 (DaijiworldNews/MB) : ''ನಮ್ಮ ಸರ್ಕಾರ ಮಹಾತ್ಮ ಗಾಂಧಿಯವರ ತತ್ವಾದರ್ಶಗಳನ್ನು ಪಾಲಿಸುತ್ತದೆ. ಗಾಂಧಿ ನಡೆಗಳು ನಮ್ಮ ರಾಜಕೀಯ ಹಾಗೂ ಜೀವನಕ್ಕೆ ಆದರ್ಶವಾಗಿದೆ'' ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು.
ಭಾರತೀಯ ಜನ ಸಂಘದ ನಾಯಕರಾಗಿದ್ದ ದೀನ ದಯಾಳ್ ಉಪಾಧ್ಯಾಯರ ಪುಣ್ಯ ತಿಥಿ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ''ಗಾಂಧಿ ಕಲಿಸಿದ ಪ್ರೀತಿ ಹಾಗೂ ಸಹಾನುಭೂತಿಯ ಪಾಠಗಳು ನಮಗೆ ಆದರ್ಶ. ನಾವು ಅವರ 150ನೇ ಜನ್ಮ ದಿನಾಚರಣೆಯನ್ನು ಆಚರಿಸಿದ್ದೇವೆ'' ಎಂದು ಹೇಳಿದರು.
ಮಹಾತ್ಮ ಗಾಂಧಿ, ಸರದಾರ್ ವಲ್ಲಭಭಾಯಿ ಪಟೇಲ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿ ಹಲವು ಮಹಾತ್ಮರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು.
''ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಅರ್ಹವಾದ ಗೌರವವನ್ನು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ನೀಡಿದೆ. ನೇತಾಜಿ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಪುನಃ ತೆರೆದ ಹೆಗ್ಗಳಿಕೆ ಕೇಂದ್ರ ಸರ್ಕಾರಕ್ಕಿದೆ'' ಎಂದು ಕೂಡಾ ಅವರು ಹೇಳಿದರು.
''ನಾವು ಸರದಾರ್ ಪಟೇಲ್ ಅವರಿಗೆ ಗೌರವ ಸಲ್ಲಿಸಲು ವಿಶ್ವದ ಅತ್ಯಂತ ದೊಡ್ಡ ಪ್ರತಿಮೆಯನ್ನು ನಿರ್ಮಿಸಿದ್ದೇವೆ. ಬಿಜೆಪಿ ಬೆಂಬಲಿತ ಸರ್ಕಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನವನ್ನು ನೀಡಿ ಗೌರವಿಸಿದೆ'' ಎಂದರು.
''ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ರಾಷ್ಟ್ರ ಕಂಡ ಸಜ್ಜನ ಸೈದ್ಧಾಂತಿಕ ರಾಜಕಾರಣಿ. ಅವರ ಏಕಾತ್ಮ ಮಾನವ ದರ್ಶನ ವಿಚಾರ ನಮಗೆಲ್ಲಾ ಸ್ಫೂರ್ತಿ. ನಮ್ಮ ಸರ್ಕಾರ ಸಂಘದ ನಾಯಕರ ಕನಸು ನನಸಾಗಿಸಲು ಬದ್ದ'' ಎಂದು ನುಡಿದರು.
''ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಹೊಂದಲು ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ'' ಎಂದು ಈ ಸಂದರ್ಭದಲ್ಲೆ ಪ್ರಧಾನಿ ಹೇಳಿದರು.