ಬೆಂಗಳೂರು, ಫೆ.11 (DaijiworldNews/PY): "ಈ ಮೊದಲು ಅಹಿಂದ ಎಂದು ಸಂಘಟನೆ ಮಾಡಿ ನಿರ್ದಿಷ್ಟ ಸಮುದಾಯಗಳನ್ನು ಪ್ರತ್ಯೇಕ ಮಾಡಿದಿರಿ. ಈಗ ಅಹಿಂದದಲ್ಲಿ ಅಲ್ಪಸಂಖ್ಯಾತರನ್ನು ಬಿಟ್ಟು ಹಿಂದ ಹೋರಾಟ ಎಂಬ ನಾಟಕ ಮಾಡುತ್ತಿದ್ದೀರಿ. ಈಗ ನಿಮ್ಮ ಹಿಂದ ನಾಟಕ ಚೆನ್ನಾಗಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಟಾಂಗ್ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಮಾನ್ಯ ಸಿದ್ದರಾಮಯ್ಯ ಅವರೇ, 2013 ರಲ್ಲಿ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿದ್ದ, ತಮ್ಮದೇ ಪಕ್ಷದ ದಲಿತ ನಾಯಕ ಪರಮೇಶ್ವರ್ ಅವರನ್ನು ಉಪಾಯದಿಂದ ಸೋಲಿಸಿ ಮುಖ್ಯಮಂತ್ರಿ ಪದವಿಯಿಂದ ದೂರ ಸರಿಸಿದಿರಿ. ಉಪಮುಖ್ಯಮಂತ್ರಿಯಾಗಿಯೂ ಮುಂದುವರೆಯಲು ಬಿಡಲಿಲ್ಲ. ಈಗ ಹಿಂದ ಎಂಬ ನಾಟಕ, ಚೆನ್ನಾಗಿದೆ!" ಎಂದು ಟಾಂಗ್ ನೀಡಿದೆ.
"ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಸ್ವಾಭಾವಿಕವಾಗಿ ರಾಜ್ಯದಲ್ಲಿ ಉನ್ನತ ಸ್ಥಾನಮಾನಕ್ಕೆ ಅರ್ಹರಾಗಿದ್ದರೂ, ದಲಿತ ಎಂಬ ಕಾರಣಕ್ಕೆ ಅಡ್ಡಗಾಲು ಹಾಕಿದ್ದು ನೀವೇ ಅಲ್ವೇ ಸಿದ್ದರಾಮಯ್ಯ? ಈಗ ಹಿಂದ ಸಮಾವೇಶದ ಮೂಲಕ ದಲಿತರ ಪರವಾಗಿ ಧ್ವನಿ ಎತ್ತುತ್ತೇನೆ ಎಂದು ನಾಟಕ ಮಾಡುವುದು ಯಾವ ಪುರುಷಾರ್ಥಕ್ಕಾಗಿ?" ಎಂದು ಪ್ರಶ್ನಿಸಿದೆ.
"ಈ ಮೊದಲು ಅಹಿಂದ ಎಂದು ಸಂಘಟನೆ ಮಾಡಿ ನಿರ್ದಿಷ್ಟ ಸಮುದಾಯಗಳನ್ನು ಪ್ರತ್ಯೇಕ ಮಾಡಿದಿರಿ. ಈಗ ಅಹಿಂದದಲ್ಲಿ ಅಲ್ಪಸಂಖ್ಯಾತರನ್ನು ಬಿಟ್ಟು ಹಿಂದ ಹೋರಾಟ ಎಂಬ ನಾಟಕ ಮಾಡುತ್ತಿದ್ದೀರಿ. ಜೀವನ ಪರ್ಯಂತ ಸಮಾಜವನ್ನು ವಿಘಟಿಸುವುದೇ ನಿಮ್ಮ ಕಾಯಕವೇ?" ಎಂದು ಕೇಳಿದೆ.
"ಅಧಿಕಾರದಲ್ಲಿದ್ದಾಗ ಲಿಂಗಾಯತ, ವೀರಶೈವ ಎಂಬ ವಿಚಾರವನ್ನು ತಂದು ಧರ್ಮದ ಕಿಚ್ಚು ಹಚ್ಚಿದಿರಿ. ಈಗ ಹಿಂದ ಹೋರಾಟ ಎಂಬ ನಾಟಕ ರಂಗ ಆರಂಭಿಸಿದ್ದೀರಿ. ಈ ನೆಲದಲ್ಲಿ ಸಂತರು, ಶರಣರು, ಸ್ವಾಮೀಜಿಗಳು ಒಗ್ಗಟ್ಟಿನ ಮಂತ್ರ ಸಾರಿದ್ದರೆ, ನೀವು ಮಾತ್ರ ವಿಘಟನೆ, ವಿಂಗಡಣೆಯಲ್ಲಿ ತೊಡಗಿಸಿಕೊಂಡಿದ್ದೀರಿ" ಎಂದಿದೆ.
ಸಮಾವೇಶದ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, "ಹಿಂದ್ ಸಮಾವೇಶವನ್ನು ನಾನು ಮಾಡುವುದಿಲ್ಲ. ಕಾಂಗ್ರೆಸ್ ಹಿಂದುಳಿದವರ ಪರವಾಗಿದೆ. ಹಾಗಾಗಿ ಹೋರಾಟದ ಅಗತ್ಯ ಇಲ್ಲ" ಎಂದಿದ್ದರು.