ಶಿವಮೊಗ್ಗ, ಫೆ.11(DaijiworldNews/HR): "ಕುರುಬ ಸಮಾವೇಶದಲ್ಲಿ ತಾವು ಭಾಗವಹಿಸದಿದ್ದರೆ ಲಕ್ಷಾಂತರ ಕುರುಬರು ಸೇರುತ್ತಾರೆಂಬ ಕಲ್ಪನೆ ಸಿದ್ದರಾಮಯ್ಯ ಅವರಿಗೆ ಇರಲಿಲ್ಲ, ಮೊನ್ನೆ ಬೆಂಗಳೂರಿನಲ್ಲಿ ಕುರುಬರ ಎಸ್ಟಿ ಮೀಸಲಾತಿ ಹೋರಾಟ ಸಮಾವೇಶ ಯಶಸ್ವಿಯಾಗಿದ್ದು ಸಿದ್ದರಾಮಯ್ಯನವರಿಗೆ ಕಿರಿಕಿರಿ ಉಂಟುಮಾಡಿದೆ" ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಗೆನೆಲೆಯ ಇಬ್ಬರು ಜಗದ್ಗುರುಗಳು ಸಿದ್ದರಾಮಯ್ಯನವರ ಮನೆಗೆ ಹೋಗಿ ಹೋರಾಟಕ್ಕೆ ಆಹ್ವಾನಿಸಿದ್ದರು, ಆದರೆ ಅವರು ನಾನು ಹೋರಾಟ ಬರುವುದಿಲ್ಲ ನೀವು ಮಾಡಿ ಎಂದಿದ್ದರು. ಅವತ್ತು ಯಾಕೆ ಕುಲಶಾಸ್ತ್ರ ಅಧ್ಯಯನದ ಬಳಿಕ ಹೋರಾಟ ಮಾಡೋಣ ಎಂದು ಸಿದ್ದರಾಮಯ್ಯ ಹೇಳಲಿಲ್ಲ" ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಇನ್ನು "ಪಾದಯಾತ್ರೆ ಬೇಡ, ಸಮಾವೇಶ ಬೇಕಿತ್ತಾ? ಆರ್ಎಸ್ಎಸ್ ಹಣ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆಲ್ಲಾ ಜಗದ್ಗುರುಗಳೇ ಉತ್ತರ ನೀಡಿದ್ದು, ತಮ್ಮನ್ನು ಬಿಟ್ಟು ನಡೆದ ಕುರುಬರ ಸಮಾವೇಶದ ಬಗ್ಗೆ ಸಂತೋಷ ಪಡುವ ಬದಲು ರಾಜಕೀಯವಾಗಿ ತಮ್ಮನ್ನು ಬಿಟ್ಟು ಕುರುಬರು ಸೇರಿದ್ದಕ್ಕೆ ಮಾತನಾಡುತ್ತಾರೆ" ಎಂದು ಟೀಕಿಸಿದ್ದಾರೆ.