ನವದೆಹಲಿ, ಫೆ.11(DaijiworldNews/HR): ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಭಾರತದಿಂದ ಕೊರೊನಾ ಲಸಿಕೆಗಳನ್ನು ಪೂರೈಸುವಂತೆ ಕೋರಿದ್ದಾರೆ.
ಕೆನಡಾ ಪ್ರಧಾನಿಯ ಮನವಿಗೆ ಸ್ಪಂದಿಸಿದ ಪ್ರಧಾನಿ ಮೋದಿ," ಇತರ ದೇಶಗಳಿಗೆ ಕಳುಹಿಸಿರುವಂತೆ ಕೆನಡಾಗೂ ಶೀಘ್ರದಲ್ಲೇ ಲಸಿಕೆಗಳನ್ನು ಕಳುಹಿಸಲಾಗುವುದು. ಕೆನಡಾದ ಲಸಿಕೆ ಅಭಿಯಾನಕ್ಕೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ" ಎಂದು ಭರವಸೆ ನೀಡಿದ್ದಾರೆ.
ಇನ್ನು ಈ ಮಾತುಕತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, "ನನ್ನ ಸ್ನೇಹಿತ ಜಸ್ಟಿನ್ ಟ್ರೂಡೊ ದೂರವಾಣಿ ಕರೆ ಮಾಡಿದ್ದಕ್ಕೆ ಸಂತೋಷವಾಯಿತು. ಕೊರೊನಾ ಲಸಿಕೆಯನ್ನು ಕೆನಡಾಗೆ ಪೂರೈಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದೇನೆ. ಹವಾಮಾನ ಬದಲಾವಣೆ, ಜಾಗತಿಕ ಆರ್ಥಿಕ ಪುನಶ್ಚೇತನ ಸೇರಿದಂತೆ ಇತರ ಮಹತ್ವದ ವಿಷಯಗಳ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಲಾಯಿತು" ಎಂದು ಹೇಳಿದ್ದಾರೆ.