ನವದೆಹಲಿ, ಫೆ.11 (DaijiworldNews/MB) : ''ನಕಲಿ ಸುದ್ದಿಗಳನ್ನು ಹರಡಲು ಹಾಗೂ ಹಿಂಸಾಚಾರ ಸೃಷ್ಟಿಗೆ ಸಾಮಾಜಿಕ ಮಾಧ್ಯಮ ಬಳಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು'' ಎಂದು ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಎಚ್ಚರಿಕೆ ನೀಡಿದರು.
ಗುರುವಾರ ಸಂಸತ್ತಿನಲ್ಲಿ ಅವರು ಮಾತನಾಡಿದ್ದು, ''ಸಾಮಾಜಿಕ ಮಾಧ್ಯಮವನ್ನು ದುರುಪಯೋಗ ಮಾಡುವವರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುತ್ತದೆ'' ಎಂದು ತಿಳಿಸಿದರು.
''ಸಾಮಾಜಿಕ ಮಾಧ್ಯಮಕ್ಕೆ ನಾವು ಗೌರವ ನೀಡುತ್ತೇವೆ. ಈ ಸಾಮಾಜಿಕ ಮಾಧ್ಯಮಗಳು ಸಾಮಾನ್ಯ ಜನರಿಗೆ ಶಕ್ತಿಯಾಗಿ ಪರಿಣಮಿಸಿದೆ. ಡಿಜಿಟಲ್ ಇಂಡಿಯಾ ಕಾರ್ಯಕ್ರಮದಲ್ಲಿ ಸಾಮಾಜಿಕ ಮಾಧ್ಯಮದ ಪಾತ್ರ ಬಹುಮುಖ್ಯ'' ಎಂದು ಹೇಳಿದರು.
''ಆದರೂ ಈಗ ನಕಲಿ ಸುದ್ದಿ, ಹಿಂಸಾಚಾರವನ್ನು ಹರಡಲು ಈ ಸಾಮಾಜಿಕ ಮಾಧ್ಯಮವನ್ನು ದುರುಪಯೋಗ ಪಡಿಸಲಾಗುತ್ತಿದೆ. ಇದರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ'' ಎಂದರು.