ಹೊಸದಿಲ್ಲಿ, ಫೆ.11(DaijiworldNews/HR): ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ತಪ್ಪು ಮಾಹಿತಿ ಹಾಗೂ ಪ್ರಚೋದನಾಕಾರಿ ಬರಹಗಳನ್ನು ಹರಡುತ್ತಿರುವ ಸಾವಿರಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ನಿಷೇಧಿಸುವಂತೆ ಮಾಡಿದ್ದ ತುರ್ತು ಆದೇಶಕ್ಕೆ ಟ್ವಿಟರ್ ನಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಟ್ವೀಟ್ಟರ್ಗೆ ಸಂದೇಶ ಕಳುಹಿಸಿರುವ ಕೇಂದ್ರ, "ಟ್ವಿಟ್ಟರ್ ತನ್ನದೇ ನಿಯಮಾವಳಿ ಮತ್ತು ಮಾರ್ಗಸೂಚಿಯನ್ನು ಹೊಂದಿದ್ದರೂ ಕೂಡ ಭಾರತದಲ್ಲಿ ಕಾರ್ಯನಿರ್ವಹಿಸುವ ವಹಿವಾಟು ಸಂಸ್ಥೆ ಭಾರತೀಯ ಕಾನೂನುಗಳನ್ನು ಕಡ್ಡಾಯವಾಗಿ ಗೌರವಿಸಬೇಕು ಹಾಗೂ ಅನುಸರಿಸಬೇಕು" ಎಂದು ತಿಳಿಸಿದ್ದು, ತುರ್ತು ಆದೇಶದಲ್ಲಿ ಹೆಸರಿಸಿದ ಖಾತೆಗಳನ್ನು ತಕ್ಷಣ ನಿಷೇಧಿಸುವಂತೆ ಆದೇಶಿಸಿದೆ.
ಇನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅನ್ವಯ ನೀಡಿರುವ ನಿರ್ದೇಶನವನ್ನು ಪಾಲಿಸಲು ಟ್ವಿಟರ್ ಸಂಸ್ಥೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಟ್ವಿಟ್ಟರ್ ಅಧಿಕಾರಿಗಳಿಗೆ ಬಂಧನ ಭೀತಿ ಎದುರಾಗಿದೆ ಎನ್ನಲಾಗಿದೆ.