ಹುಬ್ಬಳ್ಳಿ, ಫೆ.11 (DaijiworldNews/PY): "ಜೆಡಿಎಸ್ಗೆ ಉತ್ತರ ಕರ್ನಾಟಕದಲ್ಲಿ ಶಕ್ತಿ ಇಲ್ಲ. ಬಿಜೆಪಿಗೆ ಇಲ್ಲಿ ಅಲ್ಪ-ಸ್ವಲ್ಪ ಶಕ್ತಿ ಇದೆ. ಈ ಹಿನ್ನಲೆ ಜೆಡಿಎಸ್ ಇಲ್ಲಿನ ಉಪಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಬೆಳಗಾವಿ ಲೋಕಸಭೆ ಸೇರಿದಂತೆ ಬಸವ ಕಲ್ಯಾಣ, ಮಸ್ಕಿ ಉಪಚುನಾವಣೆ ಎದುರಿಸಲು ಸಿದ್ದವಾಗಿದೆ. ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳ ಹೆಸರು ಕೂಡಾ ಘೋಷಣೆ ಮಾಡುತ್ತೇವೆ" ಎಂದು ಹೇಳಿದರು.
"ಕಾಂಗ್ರೆಸ್ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದೆ. ಕಾಂಗ್ರೆಸ್ ಎಂದಿಗೂ ಕೂಡಾ ಅಹಿಂದ ಪರ. ಬಿಜೆಪಿ ಪಕ್ಷ ಅಹಿಂದ ಪರವಲ್ಲ. ಆ ಪಕ್ಷದ ಇತಿಹಾಸ ನೋಡಿದರೆ ಏನೆಂದು ತಿಳಿಯುತ್ತದೆ" ಎಂದು ತಿಳಿಸಿದರು.
"ರಾಜಕೀಯ ಅಸ್ತಿತ್ವಕ್ಕೋಸ್ಕರ ಮೀಸಲಾತಿ ಹೋರಾಟ ನಡೆಸುವುದಿಲ್ಲ. ಕುಲಶಾಸ್ತ್ರ ಅಧ್ಯಯನದ ವರದಿ ಇನ್ನೂ ಕೂಡಾ ಬಂದಿಲ್ಲ. ವರದಿ ಬಂದ ಬಳಿಕ ಕುರುಬರನ್ನು ಎಸ್ಟಿಗೆ ಸೇರಿಸಬಹುದು. ಎಸ್ಟಿಗೆ ಸೇರ್ಪಡೆ ಮಾಡಬಾರದು ಎಂದು ಎಲ್ಲಿಯೂ ಕೂಡಾ ಹೇಳಿಲ್ಲ" ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭ ಅಭಿವೃದ್ದಿ ಕಾರ್ಯ ಮಾಡಿಲ್ಲ ಎಂದ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಯಾರ್ರೀ ಅವರು ಈಶ್ವರಪ್ಪ? ಅವರಿಗೆ ಲೆಕ್ಕಾ ನೀಡಬೇಕಾ?. ಅವರಿಂದ ಪ್ರಮಾಣಪತ್ರ ಪಡೆಯಬೇಕಾ?. ಜನರಿಗೆ ಲೆಕ್ಕ ನೀಡುತ್ತೇನೆ. ಜನರೇ ಪ್ರಮಾಣಪತ್ರ ನೀಡುತ್ತಾರೆ" ಎಂದು ತಿಳಿಸಿದರು.
"ಸಂಪನ್ಮೂಲ ಕೊರತೆಯಿಂದಾಗಿ ಜೆಡಿಎಸ್ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ'' ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
"ನಮ್ಮದು ಪ್ರಾದೇಶಿಕ ಪಕ್ಷ. ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಮಗೆ ಅಗತ್ಯವಾದ ಸಂಪನ್ಮೂಲಗಳಿಲ್ಲ, ಆದ್ದರಿಂದ ನಾವು ಮುಂಬರುವ ಉಪಚುನಾವಣೆಯಲ್ಲಿ ಭಾಗವಹಿಸುತ್ತಿಲ್ಲ" ಎಂದಿದ್ದಾರೆ.