ಬೆಂಗಳೂರು, ಫೆ.11 (DaijiworldNews/MB) : ನಗರದ ಖ್ಯಾತ ಮ್ಯೂಸಿಯಿಷಿನ್ ಹರ್ಬರ್ಟ್ ಪೌಲ್ ಅವರಿಗೆ ಪಬ್ನಲ್ಲಿ ಹಾವು ಕಚ್ಚಿದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಪ್ರಸ್ತುತ ಹರ್ಬರ್ಟ್ ಪೌಲ್ ಅವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಗೀತ ಶಿಕ್ಷಕಿಯಾದ ಅವರ ಪತ್ನಿ ಬಿಂದು, ''ಹೆಣ್ಣೂರು ರಸ್ತೆಯಲ್ಲಿರುವ ಪಬ್ನಲ್ಲಿ ಮ್ಯೂಸಿಕ್ ಪ್ಲೇ ಮಾಡುತ್ತಿದ್ದ ವೇಳೆ ರಸ್ಸೆಲ್ ವೈಪರ್ (ಮಂಡಲ ಹಾವು) ಕಚ್ಚಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ ಹೃದಯ ಬಡಿತ ಏರಿಳಿತವಾಗುತ್ತಿದೆ'' ಎಂದು ತಿಳಿಸಿದ್ದಾರೆ.
ಉರಗ ತಜ್ಞ ಮೊಹಮ್ಮದ್ ಅನೀಸ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ''ಅತ್ಯಂತ ವಿಷಕಾರಿ ಹಾವುಗಳ ಪೈಕಿ ಇದು ಒಂದಾಗಿದ್ದು, ಇದು ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕಂಡು ಬರುತ್ತವೆ. ರಸ್ಸೆಲ್ ವೈಪರ್ ಹೆಮೋಟಾಕ್ಸಿನ್ ಅನ್ನು ಹೊಂದಿದ್ದು, ಇದು ಕಡಿದರೆ ಮನುಷ್ಯನದ ಹೃದಯ ಬಡಿತದಲ್ಲಿ ಏರಿಳಿತ ಉಂಟಾಗುತ್ತದೆ. ಅದು ಕತ್ತಲೆಯಲ್ಲಿ ಅಡಗಿಕೊಂಡಿರುತ್ತದೆ. ಈ ಹಾವಿನ ಶಬ್ದವು ಇತರೆ ಹಾವುಗಳಿಗಿಂತ ಜೋರಾಗಿರುತ್ತದೆ'' ಎಂದು ಮಾಹಿತಿ ನೀಡಿದ್ದಾರೆ.