ಬೆಂಗಳೂರು, ಫೆ.11 (DaijiworldNews/PY): "ಅರ್ಹತೆಯುಳ್ಳವರು ಮೀಸಲಾತಿ ಕೇಳಿದರೆ ತಪ್ಪಿಲ್ಲ. ಆದರೆ, ರಾಜಕೀಯ ಕಾರಣಕ್ಕಾಗಿ ಮೀಸಲಾತಿ ಕೇಳಿದ್ದಲ್ಲಿ ಅದು ನಾಟಕವಾಗುತ್ತದೆ" ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸ್ವಪಕ್ಷದವರ ವಿರುದ್ದ ಕೆಂಡಕಾರಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಾವ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುತ್ತದೆಯೋ ಅದಕ್ಕೆ ಸಂವಿಧಾನಬದ್ದವಾಗಿ ಮೀಸಲಾತಿ ಸಿಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ರೀತಯಾದ ಹೋರಾಟಗಳಿಗೆ ನಮ್ಮ ಬೆಂಬಲವು ಕೂಡಾ ಇರುತ್ತದೆ" ಎಂದಿದ್ದಾರೆ.
"ಬೇರೆ ಯಾವುದೋ ಉದ್ದೇಶಕೋಸ್ಕರ ಮೀಸಲಾತಿ ನೀಡಬೇಕು ಎಂದು ಹೋರಾಟ, ಪಾದಯಾತ್ರೆ ಮಾಡಿದರೆ ಅದು ರಾಜಕೀಯದ ನಾಟಕವಾಗಿ ಬಿಡುತ್ತದೆ. ಉದ್ದೇಶವು ಸ್ಪಷ್ಟವಾಗಿರಬೇಕು. ಬದಲಾಗಿ ಯಾರದೋ ಹಿತದೃಷ್ಟಿ ಕಾಪಾಡುವ ದುರುದ್ದೇಶವಿರಬಾರದು" ಎಂದು ಹೇಳಿದ್ದಾರೆ.
"ಯಾವ ಯಾವ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕು, ಹಿಂದುಳಿದ ವರ್ಗಗಳಿಗೆ ಇನ್ನು ಯಾವ ಸಮುದಾಯವನ್ನು ಸೇರ್ಪಡೆ ಮಾಡಬೇಕು ಎನ್ನುವ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿ. ಬಳಿಕ ಅದರ ಸಾಧಕ-ಬಾಧಕಗಳ ವಿಚಾರದ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ.
"ಮೊದಲು ಕುಲಶಾಸ್ತ್ರೀಯ ಅಧ್ಯಯನವನ್ನು ನಡೆಸಿ ವರದಿ ನೀಡಬೇಕು. ಸರ್ಕಾರ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳಲಿದೆ. ಈ ಬಗ್ಗೆ ಯಾರಿಗೂ ಕೂಡಾ ಯಾವುದೇ ರೀತಿಯಾದ ಸಂಶಯ ಬೇಡ. ನಮ್ಮ ಸರ್ಕಾರವು ಎಲ್ಲಾ ಸಮುದಾಯಗಳ ಹಿತ ಕಾಪಾಡಲು ಬದ್ದ" ಎಂದು ಹೇಳಿದ್ದಾರೆ.