ಬೆಂಗಳೂರು, ಫೆ.11 (DaijiworldNews/MB) : ''ಸದಾ ನುಣುಚಿಕೊಳ್ಳುವ ಮಾತುಗಳನ್ನು ಆಡುವುದನ್ನು ಬಿಟ್ಟು ಶುಲ್ಕ ಗೊಂದಲ ಬಗೆಹರಿಸಿ, ವಿದ್ಯಾರ್ಥಿಗಳ ಭವಿಷ್ಯ ಉಳಿಸಿ'' ಎಂದು ಕಾಂಗ್ರೆಸ್ ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಲ್ಲಿ ಆಗ್ರಹಿಸಿದೆ.
ಶುಲ್ಕ ಕಟ್ಟಿಲ್ಲವೆಂದು ಶಾಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದೆ ಹೊರ ಹಾಕಿದ ಕಾರಣ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದು ಈ ಸುದ್ದಿಯನ್ನು ಉಲ್ಲೇಖ ಮಾಡಿ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ.
''ಕರ್ನಾಟಕ ಬಿಜೆಪಿ ಪಕ್ಷಕ್ಕೆ ಅಧಿಕಾರದ ಹಪಹಪಿತನ ಬಿಟ್ಟರೆ ಆಡಳಿತಾತ್ಮಕ ಇಚ್ಛಾಶಕ್ತಿ ಲವಲೇಶವೂ ಇಲ್ಲ. ನೌಕರರು ಕಿಡ್ನಿ ಮಾರುವ ಮತ್ತು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮುಂದಾಗುವ ಸ್ಥಿತಿ ಬಂದಿದೆ. ಸುರೇಶ್ ಅವರೆ, ಮೈಗೆ ಎಣ್ಣೆ ಹಚ್ಚಿಕೊಂಡಂತೆ ಸದಾ ನುಣುಚಿಕೊಳ್ಳುವ ಮಾತನ್ನ ಬಿಟ್ಟು ಶುಲ್ಕ ಗೊಂದಲ ಬಗೆಹರಿಸಿ, ವಿದ್ಯಾರ್ಥಿಗಳ ಭವಿಷ್ಯ ಉಳಿಸಿ'' ಎಂದು ಮನವಿ ಮಾಡಿದೆ.