ನವದೆಹಲಿ, ಫೆ.11 (DaijiworldNews/PY): "ಮೊದಲು ಸಾರ್ವಜನಿಕವಾಗಿ ಪ್ರಧಾನಿ ಮೋದಿ ಅವರು ಕೊರೊನಾ ಲಸಿಕೆ ಪಡೆಯಲಿ. ಅವರು ಮಾತ್ರವಲ್ಲದೇ ರಾಷ್ಟ್ರಪತಿ ಸೇರಿದಂತೆ ಗೃಹ ಸಚಿವರು, ರಕ್ಷಣಾ ಸಚಿವರು ಸಹ ಸಾರ್ವಜನಿಕವಾಗಿ ಕೊರೊನಾ ಲಸಿಕೆ ಪಡೆಯಬೇಕು" ಎಂದು ಡಿಎಂಕೆ ಪಕ್ಷದ ಲೋಕಸಭಾ ಸದಸ್ಯ ದಯಾನಿಧಿ ಮಾರನ್ ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ 2021-22ನೇ ಸಾಲಿನ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕೊರೊನಾ ಲಸಿಕೆಯನ್ನು ಹಲವು ಮಂದಿ ನಂಬದ ಕಾರಣ, ಜನರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ಪ್ರಧಾನಿ ಮೋದಿ ಅವರು ಸಾರ್ವಜನಿಕವಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ.
"ಕೊರೊನಾ ಲಸಿಕೆಯ ದಕ್ಷತೆಯಿಂದಾಗಿ ಕೊರೊನಾ ಲಸಿಕೆಯ ಬಗ್ಗೆ ಜನರಲ್ಲಿ ನಂಬಿಕೆ ಇಲ್ಲ. ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಂಗ್ಲೆಂಡ್ ರಾಜ ಫಿಲಿಪ್ ಹಾಗೂ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಸಾರ್ವಜನಿಕವಾಗಿ ಕೊರೊನಾ ಲಸಿಕೆ ಪಡೆದಿದ್ದಾರೆ" ಎಂದಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರಪತಿ, ಗೃಹ ಸಚಿವರು ಹಾಗೂ ರಕ್ಷಣಾ ಸಚಿವರು ಸಾರ್ವಜನಿಕವಾಗಿ ಕೊರೊನಾ ಲಸಿಕೆ ಪಡೆಯಬೇಕು. ಇವರೆಲ್ಲರೂ ಸಾರ್ವಜನಿಕವಾಗಿ ಕೊರೊನಾ ಲಸಿಕೆ ಪಡೆದಲ್ಲಿ ಜನರಲ್ಲಿ ವಿಶ್ವಾಸ ಬರುತ್ತದೆ" ಎಂದು ಹೇಳಿದ್ದಾರೆ.