ಬೆಂಗಳೂರು, ಫೆ.11(DaijiworldNews/HR): ಕೋರಮಂಗಲದಲ್ಲಿ ತಾವು ಕೆಲಸಕ್ಕಿದ್ದ ಮನೆಯಲ್ಲಿ ಉದ್ಯಮಿಯೊಬ್ಬರ ಪುತ್ರಿಯನ್ನು ಬೆದರಿಸಿ 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಫೇಸ್ಬುಕ್ ಮತ್ತು ಇನ್ಸ್ಟ್ರಾಗ್ರಾಂ ಮೂಲಕ ಸಂಭಾಷಣೆ ಮಾಡುತ್ತ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದ ಏಳು ಮಂದಿ ನೇಪಾಳಿ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಬಂಧಿತ ಆರೋಪಿಗಳನ್ನು ನೇಪಾಳ ಮೂಲದ ಟೀಕಾ ರಾಮ್ ಬಿಸ್ಟಾ ಅಲಿಯಾಸ್ ಟೀಕು (22), ಪ್ರೇಮ್ ಬಹದ್ದೂರ್ ಬಿಸ್ಟಾ (45), ಧನ ಬಿಸ್ಟಾ (40), ಜನಕ್ ಕುಮಾರ್ (32), ಕಮಲ್ ಜಾಜೋ (28), ಜನಕ್ ಜೈಶಿ (24) ಹಾಗೂ ಸುನಿಲ್ ಬಹದ್ದೂರ್ ಶಾಹಿ (25) ಎಂದು ಗುರುತಿಸಲಾಗಿದೆ.
ಬಂಧಿತರಿಂದ 60.10 ಲಕ್ಷ ರೂ. ಮೌಲ್ಯದ 857 ಗ್ರಾಂ ಚಿನ್ನ, 66.96 ಗ್ರಾಂ ತೂಕದ ವಜ್ರದ ಆಭರಣ, 4 ವಾಚ್ಗಳು ಹಾಗೂ 2.8 ಲಕ್ಷ ರೂ. ನಗದು, ನಾಲ್ಕು ವಾಹಗಳನ್ನು ಜಪ್ತಿ ಮಾಡಲಾಗಿದೆ.
ಮದನ್ ಮೋಹನ್ ರೆಡ್ಡಿ ಎಂಬವರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಮೂರು ವರ್ಷಗಳಿಂದ ರೆಡ್ಡಿ ಮನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಆರೋಪಿಗಳಾದ ಟೀಕಾ ರಾಮ್, ಪ್ರೇಮ್ ಹಾಗೂ ಧನ ಬಿಸ್ಟಾ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮದನ್ ಮೋಹನ್ ರೆಡ್ಡಿ ಪುತ್ರಿಯೊಬ್ಬರನ್ನೇ ಬಿಟ್ಟು ಕೃಷಗಿರಿಯಲ್ಲಿರುವ ಫಾರ್ಮ ಹೌಸ್ಗೆ ಕುಟುಂಬ ಸದಸ್ಯರ ಜತೆ ಹೋಗಿದ್ದು, ಈ ವಿಚಾರ ಮೊದಲೇ ತಿಳಿದುಕೊಂಡಿದ್ದ ಟೀಕಾರಾಮ್ ಮುಂಬೈಯಲ್ಲಿದ್ದ ಇತರೆ ಆರೋಪಿಗಳನ್ನು ಒಂದು ವಾರದ ಮೊದಲೇ ಕರೆಸಿಕೊಂಡಿದ್ದು, ರೆಡ್ಡಿಯ ಪುತ್ರಿಗೆ ಗಾಜಿನ ಬಾಟಲಿ ತೋರಿಸಿ ಬೆದರಿಸಿ ಬಳಿಕ ಮನೆಯ ಲಾಕರ್ನಿಂದ 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದರು.
ಬಳಿಕ ಆಕೆ ತಂದೆಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೂಡಲೇ ಮದನ್ ರೆಡ್ಡಿ ನೆರೆ-ಹೊರೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳೀಯರು ಕೂಡಲೇ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಕೋರ ಮಂಗಲ ಪೊಲೀಸರು ಆರೋಪಿಗಳ ಪತ್ತೆಗಾಗಿ 3 ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.