ಬೆಂಗಳೂರು, ಫೆ.11 (DaijiworldNews/MB) : ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರ ಹುದ್ದೆಯನ್ನು ಕಾಂಗ್ರೆಸ್ನಿಂದ ಕಸಿಯಲು ಆಡಳಿತಾರೂಡ ಬಿಜೆಪಿಯೊಂದಿಗೆ ಜನತಾದಳ ಮೈತ್ರಿ ಮಾಡಿಕೊಂಡ ಒಂದು ದಿನದ ನಂತರ, ''ಸಂಪನ್ಮೂಲ ಕೊರತೆಯಿಂದಾಗಿ ಜೆಡಿಎಸ್ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ'' ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಹೇಳಿದ್ದಾರೆ.
ಮಸ್ಕಿ, ಬಸವಕಲ್ಯಾಣ ಮತ್ತು ಸಿಂದಗಿ ವಿಧಾನಸಭಾ ಸ್ಥಾನಗಳು ಹಾಗೂ ಬೆಳಗಾವಿ ಲೋಕಸಭಾ ಸ್ಥಾನಗಳ ಉಪಚುನಾವಣೆಗೆ ಚುನಾವಣಾ ಆಯೋಗ ಇನ್ನಷ್ಟೇ ದಿನಾಂಕ ಪ್ರಕಟಿಸಬೇಕಾಗಿದೆ.
ಏತನ್ಮಧ್ಯೆ ರಾಯಚೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, "ನಮ್ಮದು ಪ್ರಾದೇಶಿಕ ಪಕ್ಷ. ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಮಗೆ ಅಗತ್ಯವಾದ ಸಂಪನ್ಮೂಲಗಳಿಲ್ಲ, ಆದ್ದರಿಂದ ನಾವು ಮುಂಬರುವ ಉಪಚುನಾವಣೆಯಲ್ಲಿ ಭಾಗವಹಿಸುತ್ತಿಲ್ಲ" ಎಂದು ಹೇಳಿದರು.
"ಉಪಚುನಾವಣೆಗಳತ್ತ ಗಮನ ಹರಿಸುವ ಬದಲು, ತಮ್ಮ ಪಕ್ಷವನ್ನು ಪುನರ್ ನಿರ್ಮಿಸಲು ಮತ್ತು 2023 ರಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಸಜ್ಜುಗೊಳಿಸಲಾಗುವುದು. ನಾನು ಉಸಿರಾಡುವವರೆಗೂ, ಪಕ್ಷದ ನಿರ್ಮಾಣಕ್ಕಾಗಿ ನಾನು ಶ್ರಮಿಸುತ್ತೇನೆ. ಅದರಲ್ಲಿ ಯಾವುದೇ ಪ್ರಶ್ನೆಯಿಲ್ಲ. ನನ್ನ ಪಕ್ಷವನ್ನು ನಿರ್ಮಿಸುವಲ್ಲಿ ನಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ" ಎಂದು ತಿಳಿಸಿದರು.
''ಕಳೆದ ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ಶಾಸಕ ಬಿ.ನಾರಾಯಣ್ ರಾವ್, ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಮತ್ತು ಕಳೆದ ತಿಂಗಳು ಸಿಂದಗಿ ಶಾಸಕ ಎಂ.ಸಿ. ಮನಾಗುಲಿ ಅವರು ನಿಧನರಾದ ಹಿನ್ನೆಲೆ ಉಪಚುನಾವಣೆಗಳನ್ನು ಅನಿವಾರ್ಯವಾಗಿದೆ'' ಎಂದು ಕೂಡಾ ಅವರು ಹೇಳಿದರು.
2019 ರಲ್ಲಿ ತನ್ನ ಶಾಸಕ ಪ್ರತಾಪಗೌಡ ಪಾಟೀಲ್ ಮತ್ತು ಇತರ 17 ಶಾಸಕರೊಂದಿಗೆ ಪಕ್ಷಾಂತರಗೊಂಡು ಬಿಜೆಪಿಗೆ ಸೇರ್ಪಡೆಯಾದ ನಂತರ ಮಸ್ಕಿಯ ವಿಧಾನಸಭಾ ಸ್ಥಾನ ಖಾಲಿ ಬಿದ್ದಿದೆ. ಇದರಿಂದಾಗಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಉರುಳಿತು.
ಪಾಟೀಲ್ ಅವರು ಕಾಂಗ್ರೆಸ್ ನಿಂದ 2018 ರಲ್ಲಿ ಮಸ್ಕಿ ವಿಧಾನಸಭಾ ಸ್ಥಾನವನ್ನು ಗೆದ್ದಿದ್ದು, ಈಗ ಬಿಜೆಪಿ ಸೇರಿದ್ದಾರೆ.
ಈ ಸ್ಥಾನಗಳನ್ನು ಗೆಲ್ಲುವ ಪ್ರಯತ್ನದಲ್ಲಿ, ಆಡಳಿತಾರೂಡ ಬಿಜೆಪಿ ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ. 2018 ರಲ್ಲಿ 213 ಮತಗಳ ಅಂತರದಿಂದ ಪ್ರತಾಪಗೌಡ ವಿರುದ್ಧ ಸೋತ ಬಿಜೆಪಿ ಮುಖಂಡ ಬಸನ ಗೌಡ ತುರ್ವಿಹಾಳ ಅವರನ್ನು ಕಾಂಗ್ರೆಸ್ ಈಗಾಗಲೇ ಸೇರಿಸಿಕೊಂಡಿದ್ದು ಆಡಳಿತಾರೂಢ ಬಿಜೆಪಿ ಉಪಾಧ್ಯಕ್ಷ ಮತ್ತು ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಈ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದಾರೆ.