ಬೆಂಗಳೂರು, ಫೆ.11 (DaijiworldNews/MB) : ''ಸಿನಿಮಾ ನಟರು ರೈತರ ಪರವಾಗಿ ಮಾತನಾಡಿದರೆ ಏನಾಗುತ್ತದೆ?'' ಎಂದು ಪ್ರಶ್ನಿಸಿದ ನಟ ಶಿವರಾಜ್ಕುಮಾರ್ ಅವರು, ''ಪ್ರತಿ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಬೆಂಬಲ ನೀಡಿಯೇ ನೀಡುತ್ತಾನೆ. ನನ್ನ ಕೈಯ್ಯಲ್ಲಿ ಇದ್ದಿದ್ದರೆ ಇಂದೇ ಬರೆದುಕೊಡುತ್ತಿದ್ದೆ'' ಎಂದು ಹೇಳಿದ್ದಾರೆ.
ರೈತ ಪ್ರತಿಭಟನೆ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ನಾವು ರೈತರ ಪರವಾಗಿ ಮಾತನಾಡಿದರೆ ಏನಾಗುತ್ತದೆ? ನಮಗೆ ಸಿನಿಮಾ ಇಂಡಸ್ಟ್ರಿಯೊಳಗಿನ ಸಮಸ್ಯೆಯನ್ನೇ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಎಲ್ಲರಿಗೂ ಬೆಂಬಲ ಸೂಚಿಸುತ್ತೇವೆ. ಅದರಲ್ಲೂ ನಾನು ಇಂತಹ ಹೋರಾಟಕ್ಕೆ ಬೆಂಬಲ ನೀಡುತ್ತೇನೆ. ಅದು ಬರೀ ತೋರಿಕೆಯಾಗಿ ಕಾಣುತ್ತದೆ. ಆದರೆ ಸಮಸ್ಯೆ ಅರ್ಥ ಮಾಡಿಕೊಂಡು ಬೆಂಬಲ ಸೂಚಿಸುವುದೇ ಬೇರೆ. ಅಷ್ಟಕ್ಕೂ ನನ್ನ ಕೈಯ್ಯಲ್ಲಿ ಇದ್ದಿದ್ದರೆ ಇಂದೇ ಬರೆದುಕೊಡುತ್ತಿದ್ದೆ. ಆದರೆ ನಮ್ಮ ಕೈಯಲ್ಲಿ ಏನೂ ಇಲ್ಲ. ಅದಕ್ಕಾಗಿ ಸರ್ಕಾರವಿದೆ'' ಎಂದು ಹೇಳಿದರು.
''ಸರ್ಕಾರವು ಎಲ್ಲದಕ್ಕೂ ಜವಾಬ್ದಾರಿಯುತ, ರೈತರ ಸಮಸ್ಯೆ ಬಗೆಹರಿಸುವುದು ಸರ್ಕಾರದ ಕರ್ತವ್ಯ. ಅವರು ಅದನ್ನು ಮಾಡುತ್ತಾರೆ. ನಾವು ಕೃಷಿ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದರೆ ಅದರ ಬಗ್ಗೆ ಮಾತನಾಡಬಹುದು. ಅದಕ್ಕಾಗಿ ಸರ್ಕಾರವಿದೆ, ಕೃಷಿ ಸಚಿವರಿದ್ದಾರೆ. ಅವರಿಗೆ ನಮಗಿಂತ ಹೆಚ್ಚು ತಿಳಿದಿದೆ. ಸಮಸ್ಯೆಗಳನ್ನು ಭಾರತದ ಚೌಕಟ್ಟಿನೊಳಗೆ ಬಗೆಹರಿಸಬೇಕು'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
''ಭಾರತೀಯ ಚಿತ್ರರಂಗವೇ ಬೀದಿಗಳಿದು ಹೋರಾಟ ಮಾಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂದರೆ, ಈ ರೀತಿ ಹೋರಾಟಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು'' ಎಂದು ಕೂಡಾ ಈ ಸಂದರ್ಭದಲ್ಲಿ ಹೇಳಿದರು.