ಬೆಂಗಳೂರು, ಫೆ.11 (DaijiworldNews/MB) : ''ಮೀಸಲಾತಿ ಬಗ್ಗೆ ವಿವಿಧ ಸಮುದಾಯಗಳ ಸ್ವಾಮೀಜಿಗಳ ಬೇಡಿಕೆಗಳ ವಿಚಾರವಾಗಿ ಕಾನೂನು ತಜ್ಞರು ಮತ್ತು ಅಡ್ವೊಕೇಟ್ ಜನರಲ್ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು'' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ವಿವಿಧ ಜಾತಿ ಮತ್ತು ಸಮುದಾಯಗಳ ಸ್ವಾಮೀಜಿಗಳು ಈಗಾಗಲೇ ತಮ್ಮ ಸಮುದಾಯದ ಮೀಸಲಾತಿಗಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡುವ ಸಂದರ್ಭ ನೀಡಿದ ಈ ಹೇಳಿಕೆ ಮಹತ್ವ ಪಡೆದಿದೆ.
''ಸ್ವಾಮೀಜಿಗಳ ಬೇಡಿಕೆ ಈಡೇರಿಸಲಾರೆವೆಂದು ನಾವೆಲ್ಲೂ ಹೇಳಿಲ್ಲ. ಆದರೆ ಕಾನೂನು ಪ್ರಕಾರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಕೊಂಚ ಸಮಯ ಬೇಕಾಗುತ್ತದೆ. ನಿಮ್ಮ ಬೇಡಿಕೆ ಈಡೇರಿಸಲು ನಮ್ಮಿಂದಾದ ಎಲ್ಲಾ ಪ್ರಯತ್ನವನ್ನು ನಾವು ಮಾಡುತ್ತೇವೆ. ನೀವು ಮಾತ್ರ ಸಹನೆಯಿಂದ ಇರಬೇಕು'' ಎಂದು ಮುಖ್ಯಮಂತ್ರಿ ಬುಧವಾರ ಮನವಿ ಮಾಡಿದರು.