ಚಿತ್ರದುರ್ಗ, ಫೆ.10 (DaijiworldNews/PY): "ಪರಿಶಿಷ್ಟ ಪಂಗಡ ಸೌಲಭ್ಯಕ್ಕೆ ಆಗ್ರಹಿಸಿ ಕುರುಬ ಸಮುದಾಯ ನಡೆಸಿದ ಹೋರಾಟವು ಯಶಸ್ವಿಯಾಗಿರುವುದನ್ನು ಕಂಡು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿರಿಕಿರಿ ಅನುಭವಿಸುತ್ತಿದ್ದಾರೆ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಬುಧವಾರ ಹೊಸದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ಹಿಂದುಳಿದ ಸಮುದಾಯಗಳನ್ನು ಬಳಸಿಕೊಂಡಿ ಮುಖ್ಯಮಂತ್ರಿಯಾಗಿದ್ದಾರೆ. ಬದಲಾಗಿ ಯಾವುದೇ ಉತ್ತಮವಾದ ಕಾರ್ಯವನ್ನು ಕೈಗೊಂಡಿಲ್ಲ. ಅವರನ್ನು ಜಾಗೃತ ಕುರುಬ ಸಮುದಾಯವು ಪಕ್ಕಕ್ಕೆ ಸರಿಸುತ್ತಿದೆ. ಒಬ್ಬಂಟಿಯಾಗುತ್ತಿರುವ ಭಯಕ್ಕೆ ಅವರು ಸುಖಾ ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ" ಎಂದರು.
"ಪರಿಶಿಷ್ಟ ಪಂಗಡದ ಬೇಡಿಕೆಯನ್ನು ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ಸರ್ಕಾರದ ಮುಂದಿಟ್ಟಿದ್ದು, ಇದು ಒಂದುವೇಳೆ ಸಾಕಾರಗೊಂಡಲ್ಲಿ ರಾಜ್ಯದ 60 ಲಕ್ಷ ಮಂದಿ ಪ್ರಧಾನಿ ಮೋದಿ ಅವರ ಬೆಂಬಲಕ್ಕೆ ನಿಲ್ಲಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಈ ವಿಚಾರವನ್ನು ಸಹಿಸಲು ಆಗುತ್ತಿಲ್ಲ" ಎಂದು ಹೇಳಿದರು.
"ಜನರು ಕಾಂಗ್ರೆಸ್ ಪಕ್ಷವನ್ನು ಮೂಲೆಗೆ ತಳ್ಳಿದ್ದಾರೆ. ಜನರು ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸಂದೇಶ ರವಾನಿಸಿದ್ದಾರೆ. ಆದರೂ, ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎನ್ನುವ ಹಗಲು ಕನಸನ್ನುಕಾಣುತ್ತಿದ್ದಾರೆ" ಎಂದರು.