ರಾಯಗಂಜ್, ಫೆ.10 (DaijiworldNews/MB) : ''ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯಲೆಂದೇ ಬಿಜೆಪಿ ನಾಯಕರು ರಥಯಾತ್ರೆ ಮಾಡುತ್ತಿದ್ದಾರೆ, ಅದು ಅವರ ರಾಜಕೀಯ ಅಜಂಡಾ'' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಬಿಜೆಪಿ ನಾಯಕರು "ದೇವರುಗಳಂತೆ" ರಥಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಇಂದು ರಾಯಗಂಜ್ ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, "ರಥಯಾತ್ರೆ ಎಂಬುದು ಒಂದು ಧಾರ್ಮಿಕ ಹಬ್ಬ. ನಾವೆಲ್ಲರೂ ಈ ಉತ್ಸವದಲ್ಲಿ ಭಾಗವಹಿಸಿದ್ದೇವೆ. ಭಗವಂತ ಜಗನ್ನಾಥ, ಬಲರಾಮ ಮತ್ತು ದೇವತೆ ಸುಭದ್ರಾ ಈ ರಥದಲ್ಲಿ ಪ್ರಯಾಣಿಸುವುದು ನಾವು ನೋಡಿದ್ದೇವೆ. ಆದರೆ ಬಿಜೆಪಿ ನಾಯಕರು ಸಮಾಜವನ್ನು ವಿಭಜಿಸಲೆಂದು ಈ ರಥಯಾತ್ರೆಯನ್ನು ಬಳಸಿಕೊಳ್ಳುತ್ತಿದ್ದಾರೆ'' ಎಂದು ದೂರಿದರು.
''ಹಿಂದೂ ಧರ್ಮದ ಬಗ್ಗೆ ಸುಳ್ಳನ್ನು ಕೇಸರಿ ಪಕ್ಷವು ಹರಡುತ್ತಿದೆ. ಅವರು ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟುತ್ತಿದ್ದಾರೆ. ಅವರು ರಥಯಾತ್ರೆ ಮಾಡುವುದು ರಾಜಕೀಯ ಉದ್ದೇಶದಿಂದ. ದೇವರುಗಳಂತೆ ಬಿಜೆಪಿ ನಾಯಕರು ರಥಗಳಲ್ಲಿ ಪ್ರಯಾಣಿಸುತ್ತಿದ್ದಾರೆ" ಎಂದು ಟೀಕಿಸಿದರು.