ನವದೆಹಲಿ, ಫೆ.10 (DaijiworldNews/PY): "ಕೇಂದ್ರ ಸರ್ಕಾರವು ರೈತರ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ" ಎಂದು ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಲ್ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, "ಬಂಡವಾಳಶಾಹಿಗಳ ಪರವಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರವು ಭಾರತೀಯ ಆರ್ಥಿಕತೆಯನ್ನು ದುರುಪಯೋಗಪಡಿಸಿಕೊಂಡಿದೆ" ಎಂದು ಆರೋಪಿಸಿದ್ದಾರೆ.
"2018ರಲ್ಲಿ ಭಾರತೀಯ ಜನಸಂಖ್ಯೆಯ ಶೇ.1ರಷ್ಟು ಜನರು ಶೇ 58ರಷ್ಟು ಆಸ್ತಿಯನ್ನು ಹೊಂದಿದ್ದು, 2019ರಲ್ಲಿ ಶೇ.1ರಷ್ಟು ಜನರು ಶೇ.73ರಷ್ಟು ಒಡೆತನವನ್ನು ಹೊಂದಿದ್ದರು. ಬಂಡವಾಳಶಾಹಿ ಸರ್ಕಾರದ ಶ್ರೇಷ್ಠ ಸಾಧನೆ ಇದು. ಹಾಗಾದರೆ, ದೇಶದ ಸಂಪತ್ತು ಎಲ್ಲಿಗೆ ಹೋಗುತ್ತಿದೆ?" ಎಂದು ಕೇಳಿದ್ದಾರೆ.
"ಬಜೆಟ್ನಲ್ಲಿ ನಿರುದ್ಯೋಗ ಸಮಸ್ಯೆಯ ನಿವಾರಣೆಯ ಬಗ್ಗೆ ಯಾವುದೇ ರೀತಿಯಾದ ಕ್ರಮ ತೆಗೆದುಕೊಂಡಿಲ್ಲ. ಲಾಕ್ಡೌನ್ನ ಸಂದರ್ಭ ಸುಮಾರು 12 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸಲು ಯಾವ ಕ್ರಮ ಕೈಗೊಂಡಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ.
"ನೀವು ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡಿದೆ ಎನ್ನುತ್ತೀರಿ. ಹಾಗಾದರೆ, ಬಿಜೆಪಿ ಏನು ಮಾಡಿದೆ?. ಬಿಜೆಪಿಯು, ಕೇರಳ, ಅಸ್ಸಾಂ, ತಮಿಳುನಾಡಿಗೆ ಅಧಿಕ ಯೋಜನೆಗಳನ್ನು ಘೋಷಿಸುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣದೊಂದಿಗೆ ನೋಟ್ ಬ್ಯಾಂಕ್ ರಾಜಕಾರಣವನ್ನು ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.