ಶ್ರೀನಗರ, ಫೆ.10 (DaijiworldNews/PY): "ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನ ನಿಯಂತ್ರಣ ರೇಖೆಯ ಬಳಿ ಭಾರತೀಯ ಗಡಿಯೊಳಗೆ ಅಕ್ರಮವಾಗಿ ಒಳನುಸುಳಲು ಯತ್ನಿಸುತ್ತಿದ್ದ ನುಸುಳುಕೋರನೋರ್ವನನ್ನು ಭಾರತೀಯ ಸೇನಾಪಡೆಗಳು ಗುಂಡಿಕ್ಕಿ ಹತ್ಯೆಗೈದಿದೆ" ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಮಂಗಳವಾರ ರಾತ್ರಿ ಉತ್ತರ ಕಾಶ್ಮೀರದ ಉರಿಯ ದುಲಂಜಾದಲ್ಲಿ ನಿಯಂತ್ರಣ ರೇಖೆಯ ಬಳಿ ಭಾರತದ ಗಡಿಯೊಳಗೆ ಅಕ್ರಮವಾಗಿ ಒಳನುಸುಳುತ್ತಿದ್ದ ಓರ್ವ ನುಸುಳುಕೋರ್ವನನ್ನು ಯೋಧರು ಗುಂಡಿಕ್ಕಿ ಹತ್ಯೆಗೈದಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ಉರಿಯ ಕುಂದಿಬರ್ಜಲ ಕಮಲ್ಕೋಟೆ ನಿವಾಸಿ ಸರ್ಫ್ರಾಜ್ ಮಿರ್ (56 ವರ್ಷ) ಎಂದು ಗುರುತಿಸಲಾಗಿದೆ
"1990ರಲ್ಲಿ ಮಿರ್ ಎಲ್ಒಸಿ ದಾಟಿ ಪಾಕಿಸ್ತಾನಕ್ಕೆ ತೆರಳಿದ್ದು, ಬಳಿಕ 1992ರಲ್ಲಿ ಪುನಃ ಭಾರತಕ್ಕೆ ವಾಪಾಸ್ಸಾಗಿದ್ದ. 1995ರಲ್ಲಿ ಆತ ಭದ್ರತಾ ಪಡೆಗಳ ಮುಂದೆ ಶರಣಾಗಿದ್ದು, ಬಳಿಕ 2005ರಲ್ಲಿ ಪಾಕಿಸ್ತಾನಕ್ಕೆ ಹಿಂದಿರುಗಿದ್ದ" ಎಂದು ಅಧಿಕಾರಿ ಹೇಳಿದ್ದಾರೆ.
"ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ ಪ್ರದೇಶದಲ್ಲಿ ಅಧಿಕಾರಿಗಳು ನೀಡಿದ ಗುರುತಿನ ಚೀಟಿ ಹಾಗೂ ಬಂದೂಕನ್ನು ಭಾರತೀಯ ಸೇನೆಯು ವಶಕ್ಕೆ ಪಡೆದುಕೊಂಡಿದೆ" ಎಂದಿದ್ದಾರೆ.