ನವದೆಹಲಿ, ಫೆ.10 (DaijiworldNews/PY): ಎರಡು ದಿನಗಳ ಹಿಂದೆ ಸಂಸತ್ತಿನಲ್ಲಿ ಬಳಕೆಯಲ್ಲಿದ್ದ ಆಂದೋಲನ ಜೀವಿ ಎನ್ನುವ ಪದದ ವಿಚಾರವಾಗಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಟ್ವೀಟ್ ಮಾಡಿದ್ದು, "ನಾನು ಹೆಮ್ಮೆಯ ಆಂದೋಲನ ಜೀವಿ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನಾನು ಹೆಮ್ಮೆಯ ಆಂದೋಲನ ಜೀವಿ. ಸರ್ವಶ್ರೇಷ್ಠ ಆಂದೋಲನ ಜೀವಿ ಮಹಾತ್ಮಾ ಗಾಂಧಿ" ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರರ ಮೂರು ಕೃಷಿ ಕಾಯ್ದೆಯ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಯ ವಿಚಾರವನ್ನು ಉಲ್ಲೇಖ ಮಾಡಿ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, "ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಆಂದೋಲನಜೀವಿಗಳು" ಎಂದಿದ್ದರು. ಈ ಪದದ ಬಗ್ಗೆ ಈಗ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಪ್ರಧಾನಿಯವರು ರಾಷ್ಟ್ರಪತಿ ಭಾಷಣಕ್ಕೆ ಉತ್ತರವಾಗಿ ಸಂಸತ್ತಿನಲ್ಲಿ ಮಾತನಾಡಿದ್ದು, ಪ್ರತಿಭಟನಾಕಾರರ ಹಿಂದಿರುವವರ ವಿರುದ್ದ ಕೆಂಡಕಾರಿದ್ದು, "ದೇಶವು ಇಂತವರ ಬಗ್ಗೆ ಎಚ್ಚರಿಕೆವಹಿಸಬೇಕು. ಆಂದೋಲನ ಜೀವಿ ಎನ್ನುವ ನೂತನ ಬೆಳೆ ಇದೆ. ಇಂತ ಜೀವಿಗಳು ಪ್ರತಿಭಟನೆಗೋಸ್ಕರ ಬದುಕುತ್ತವೆ. ಅವರು ನೂತನ ಆಂದೋಲನಗಳನ್ನು ಪ್ರಾರಂಭಿಸುವ ಮಾರ್ಗಗಳನ್ನು ಹುಡುಕುತ್ತಿದ್ದು, ದೇಶವು, ಈ ಆಂದೋಲನಜೀವಿಗಳ ಬಗ್ಗೆ ಜಾಗೃತೆವಹಿಸಬೇಕು" ಎಂದಿದ್ದರು.
ಪ್ರಧಾನಿ ಮೋದಿ ಅವರು ಬಳಸಿರುವ ಪದವನ್ನು ಕೆಲವರು ಸ್ವಾಗತಿಸಿದ್ದಾರೆ. ಇನ್ನು ಈ ಪದವನ್ನು ಬಿಜೆಪಿಯ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ "ವರ್ಷದ ಪದ" ಎಂದು ಹೇಳಿದ್ದಾರೆ.
ಕವಿ ಮೀನಾ ಕಂದಸ್ವಾಮಿ ಅವರು ಟ್ವಿಟ್ಟರ್ ಪ್ರೊಫೈಲ್ ಹೆಸರನ್ನು 'ಆಂದೋಲನಜೀವಿ' ಡಾ.ಮೀನಾ ಕಂದಸ್ವಾಮಿ ಎಂದು ಬದಲಿಸಿಕೊಂಡಿದ್ದಾರೆ.
ಕಾಂಗ್ರೆಸ್ನ ಸೋಷಿಯಲ್ ಮೀಡಿಯಾ ಸಂಯೋಜಕ ಗೌರವ್ ಪಾಂಧಿಯವರು, 'ಗೌರವ್ ಪಾಂಧಿ-ಆಂದೋಲನ ಜೀವಿ' ಎಂದು ಬದಲಿಸಿಕೊಂಡಿದ್ದಾರೆ.