ಪಶ್ಚಿಮ ಬಂಗಾಳ, ಫೆ.10 (DaijiworldNews/PY): "ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು, ಬಂಗಾಳದ ರೈತರ ಹಾಗೂ ಬುಡಕಟ್ಟು ಜನಾಂಗದ ಕಲ್ಯಾಣಕ್ಕಾಗಿ ಯಾವುದೇ ಕಾರ್ಯಕ್ರಮಗಳನ್ನು ಮಾಡಿಲ್ಲ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯಲ್ಲಿ ಚಾ ಚಕ್ರಾ ಎನ್ನುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, "ರೈತರು ಹಾಗೂ ಬುಡಕಟ್ಟು ಜನಾಂಗದ ಕಲ್ಯಾಣಕ್ಕಾಗಿ ಮಮತಾ ಬ್ಯಾನರ್ಜಿ ಅವರು ಯಾವುದೇ ಕಾರ್ಯಗಳನ್ನು ಮಾಡಿಲ್ಲ. ಒಂದು ವೇಳೆ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ, ಜನರ ಪ್ರಗತಿಗಾಗಿ ಪಕ್ಷ ಶ್ರಮಿಸಲಿದೆ" ಎಂದು ಭರವಸೆ ನೀಡಿದ್ದಾರೆ.
"ಅಮ್ಮ, ಮಣ್ಣು ಹಾಗೂ ಜನರ ಹೆಸರಿನಲ್ಲಿ ಚುನಾವಣೆಯಲ್ಲಿ ಜಯ ಸಾಧಿಸಿದವರು ಇದೀಗ ಸರ್ವಾಧೀಕಾರ ಹಾಗೂ ಬಲವಂತದ ತಂತ್ರಗಳನ್ನು ಪಾಲಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
"ಮಮತಾ ಬ್ಯಾನರ್ಜಿ ಅವರು ಮುಂಬರುವ ಚುನಾವಣೆಯಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕು. ಕಮಲ ಅರಳಬೇಕು. ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ" ಎಂದರು.
"ಬಂಗಾಳವನ್ನು ಪ್ರಧಾನಿ ಮೋದಿ ಅವರು ಆಧುನೀಕರಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ಮಮತಾ ಬ್ಯಾನರ್ಜಿ ಅವರು ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದಾರೆ" ಎಂದರು.