ರಾಯಚೂರು, ಫೆ.10 (DaijiworldNews/PY): "ರೈತರ ಪ್ರತಿಭಟನೆ ಕೇವಲ ಪ್ರತಿಷ್ಠೆಯ ವಿಚಾರವಾಗಬಾರದು. ಮಾತುಕತೆಯ ಮುಖಾಂತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ" ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.
ದೇವದುರ್ಗದಲ್ಲಿ ಆಯೋಜಿಸಿರುವ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿಲು ಹೋಗುವ ಮುನ್ನ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರೈತರಿಗೆ ತಮ್ಮ ನೋವನ್ನು ಹೇಳಿಕೊಳ್ಳುವ ಸ್ವಾತಂತ್ರ್ಯವಿದೆ. ರೈತರು ಗಾಳಿ, ಚಳಿಯನ್ನು ಲೆಕ್ಕಿಸದೇ ಹೋರಾಟ ಮಾಡಿಕೊಂಡು ಬಂದಿದ್ದಾರೆ" ಎಂದರು.
"ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಗಲಭೆಗೆ ಯಾರು ಕಾರಣ ಎನ್ನುವುದು ತನಿಖೆ ನಡೆದಿದೆ. ಖಲಿಸ್ತಾನ, ವಿದೇಶದಿಂದ ಹಣ ಬಂದಿತ್ತು ಎನ್ನುವ ವದಂತಿಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರದ ಬಗ್ಗೆ ಗೃಹ ಸಚಿವಾಲಯ ತನಿಖೆ ಮಾಡುತ್ತಿದೆ. ತನಿಖಾ ವರದಿಯನ್ನು ಆಧರಿಸಿ ಆ ಬಗ್ಗೆ ಮಾತನಾಡುತ್ತೇನೆ" ಎಂದು ತಿಳಿಸಿದರು.
ಮೀಸಲಾತಿ ಹೋರಾಟದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಿದ್ದರಾಮಯ್ಯ ಅವರಿಗೆ ಈ ವಿಚಾರದ ಬಗ್ಗೆ ಸೂಕ್ತವಾದ ಮಾಹಿತಿ ಇದೆ. ಅವರೇ ಈ ಬಗ್ಗೆ ಮಾತನಾಡುತ್ತಾರೆ" ಎಂದರು.