ನವದೆಹಲಿ, ಫೆ.10 (DaijiworldNews/MB) : ದೆಹಲಿಯ ಕೆಂಪು ಕೋಟೆಯಲ್ಲಿ ಗಣರಾಜ್ಯೋತ್ಸವದ ದಿನ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿ ಇಕ್ಬಾಲ್ ಸಿಂಗ್ನನ್ನು ಪಂಜಾಬ್ನ ಹೋಶಿಯಾರ್ಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ನಟ ದೀಪ್ ಸಿಧು ಅನ್ನು ಮಂಗಳವಾರ ದೆಹಲಿ ಪೊಲೀಸರು ಬಂಧಿಸಿದ್ದು ಸಿಧುಗೆ ದೆಹಲಿ ಕೋರ್ಟ್ 7 ದಿನದ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
"ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರಾಲಿ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದೀಪ್ ಸಿಧು ಸೇರಿದಂತೆ ಪ್ರಮುಖ ಆರೋಪಿಗಳಾದ ಜುಗ್ ರಾಜ್ ಸಿಂಗ್, ಗುರ್ಜೋತ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಕುರಿತು ಮಾಹಿತಿ ನೀಡಿದವರಿಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಈ ಹಿಂದೆ ಘೋಷಿಸಿದ್ದರು.
ಗಣರಾಜ್ಯೋತ್ಸವ ದಿನ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭ ಹಿಂಸಾಚಾರ ನಡೆದಿದ್ದು ಒಂದು ರೈತರ ಗುಂಪು ಕೆಂಪುಕೋಟೆಗೆ ನುಗ್ಗಿ ದಾಂಧಲೆ ನಡೆಸಿ ಅಲ್ಲಿ ಬೇರೆ ಧ್ವಜವೊಂದನ್ನು ಹಾರಿಸಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ದೀಪ್ ಸಿಧು ಕಳೆದ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಸಂಸದ ನಟ ಸನ್ನಿ ಡಿಯೋಲ್ ಪರ ಪ್ರಚಾರದ ಮ್ಯಾನೇಜರ್ ಆಗಿದ್ದ. ಈತ ಪ್ರಧಾನಿ ಮೋದಿಯವರೊಂದಿಗೆ ನಿಂತು ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ದೀಪ್ ಸಿಧು ತನ್ನ ಮೇಲೆ ಆರೋಪ ಕೇಳಿಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದು ದೆಹಲಿ ಪೊಲೀಸರು ಈತನ ಪತ್ತೆಗಾಗಿ ಲುಕ್ ಔಟ್ ನೊಟೀಸ್ ಹೊರಡಿಸಿದ್ದರು.