ಬೆಂಗಳೂರು, ಫೆ.10 (DaijiworldNews/PY): "ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಅವರು ಯಾವ ಬೋಧಿ ವೃಕ್ಷದ ಕೆಳಗೆ ಕುಳಿತು ಜ್ಞಾನ ಸಂಪಾದಿಸಿಕೊಂಡಿದ್ದಾರೆ? ಮೋದಿಯವರನ್ನು ಹೊಗಳಿ ಅಟ್ಟಕೇರಿಸುವುದೇ ಕಾರ್ಣಿಕ್ರವರ ಪ್ರಕಾರ ಜ್ಞಾನವೇ?" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕಾಂಗ್ರೆಸಿಗರ ಅಲ್ಪಜ್ಞಾನದ ಬಗ್ಗೆ ಮಾತನಾಡುವ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಅವರು ಯಾವ ಬೋಧಿ ವೃಕ್ಷದ ಕೆಳಗೆ ಕುಳಿತು ಜ್ಞಾನ ಸಂಪಾದಿಸಿಕೊಂಡಿದ್ದಾರೆ? ಮೋದಿಯವರನ್ನು ಹೊಗಳಿ ಅಟ್ಟಕೇರಿಸುವುದೇ ಕಾರ್ಣಿಕ್ರವರ ಪ್ರಕಾರ ಜ್ಞಾನವೇ? ವಾಸ್ತವ ಅರಿಯದೆ ಭ್ರಮೆಯಲ್ಲಿ ಬದುಕುವುದೂ ಕೂಡ ಅಜ್ಞಾನ ಎಂಬ ಕನಿಷ್ಟ ಜ್ಞಾನವನ್ನು ಕಾರ್ಣಿಕ್ ಬೆಳಸಿಕೊಳ್ಳಲಿ" ಎಂದಿದ್ದಾರೆ.
"ಮೋದಿಯವರ ಆಡಳಿತವನ್ನು ಹಿಟ್ಲರ್ ಆಡಳಿತಕ್ಕೆ ಹೋಲಿಸಿದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಕೇಂದ್ರ ಸರ್ಕಾರದ ಪ್ರತಿ ನೀತಿ ನಿರ್ಧಾರಗಳಲ್ಲೂ ಹಿಟ್ಲರ್ನ ಸರ್ವಾಧಿಕಾರಿ ಧೋರಣೆ ಕಾರ್ಣಿಕ್ರವರಿಗೆ ಕಾಣಿಸುತ್ತಿಲ್ಲವೆ? ಅಥವಾ ಗೊತ್ತಿದ್ದರೂ ಜಾಣ ಕುರುಡೇ? ಸಂವಿಧಾನ ಬದಲಿಸುವ ಮನಸ್ಥಿತಿಯವರಿಗೂ ಹಿಟ್ಲರ್ಗೂ ಏನಾದರೂ ವ್ಯತ್ಯಾಸವಿದೆಯೇ?" ಎಂದು ಪ್ರಶ್ನಿಸಿದ್ದಾರೆ.
"ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್, ಮೋದಿ ಆಡಳಿತದ ಯಾವ ಅಭಿವೃದ್ಧಿ ಪಥದ ಬಗ್ಗೆ ಮಾತನಾಡುತ್ತಿದ್ದಾರೆ? ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಿದ್ದು, ಕಾರ್ಪೋರೆಟ್ ಸ್ನೇಹಿತರಿಗಾಗಿ ರೈತರ ಕುತ್ತಿಗೆ ಇಸುಕುತ್ತಿರುವುದು, ಜಿಡಿಪಿಯನ್ನು ಪಾತಾಳಕ್ಕೆ ಇಳಿಸಿದ್ದು, ಇಂಧನ ಬೆಲೆಯೇರಿಸಿ ಜನರನ್ನು ಸುಲಿಗೆ ಮಾಡುತ್ತಿರುವುದು ಅಭಿವೃದ್ಧಿಯ ಪಥವೆ?" ಎಂದು ಕೇಳಿದ್ದಾರೆ.
"ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇಮಕವಾಗಿರುವ ರಾಮಲಿಂಗಾರೆಡ್ಡಿ ಅವರ ಪುತ್ರಿ, ಶಾಸಕಿ ಸೌಮ್ಯ ರೆಡ್ಡಿ ಕಾಂಗ್ರೆಸ್ ಪಕ್ಷದ ನಾಟಕೀಯ ಪ್ರತಿಭಟನೆ ಸಂದರ್ಭ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸುವ ಕೀಳುಮಟ್ಟದ ವರ್ತನೆ ತೋರಿದ್ದಾರೆ" ಎಂದು ಗಣೇಶ್ ಕಾರ್ಣಿಕ್ ಹೇಳಿದ್ದರು.
"ಇದನ್ನು ಬಿಜೆಪಿ ಖಂಡಿಸುತ್ತದೆ. ತಮ್ಮ ಪುತ್ರಿಯ ವರ್ತನೆಯ ಬಗ್ಗೆ ರಾಮಲಿಂಗರೆಡ್ಡಿ ಅವರು ವಿವರಣೆ ನೀಡಬೇಕು" ಎಂದಿದ್ದರು.
"ನಿಮ್ಮ ಪುತ್ರಿಗೆ ನೀವು ಇದೇ ರೀತಿಯಾದ ತರಬೇತಿ ನೀಡಿದ್ದೀರಾ?" ಎಂದು ಕೇಳಿದ್ದರು.