ಬೆಂಗಳೂರು, ಫೆ.10 (DaijiworldNews/MB) : ಸಮನ್ವಯತೆ ಇಲ್ಲದ ಸರ್ಕಾರದೊಳಗಿನ ಕಿಚ್ಚು ರಾಜ್ಯದ ಅಭಿವೃದ್ಧಿ, ಹಿತಕ್ಕೆ ಮಾರಕವಾಗಿದೆ ಎಂದು ಕಾಂಗ್ರೆಸ್ ಅಭಿಪ್ರಾಯಿಸಿದೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಆನಂದ್ ಸಿಂಗ್ ಬಳ್ಳಾರಿ ಉಸ್ತುವಾರಿ ಪಡೆಯುವಲ್ಲಿ ಯಶಸ್ವಿಯಾದರು. ಇದೀಗ ಬಳ್ಳಾರಿಯಿಂದ ವಿಜಯನಗರವನ್ನು ಬೇರ್ಪಡಿಸಲಾಗಿದ್ದು ಹೊಸ ಜಿಲ್ಲೆಯನ್ನಾಗಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಜಿ. ಸೋಮಶೇಖರ ರೆಡ್ಡಿಯವರು ಆನಂದ್ ಸಿಂಗ್ ಅವರನ್ನು ಜಿಲ್ಲಾ ಉಸ್ತುವಾರಿ ಸ್ಥಾನದಿಂದ ತೆರವುಗೊಳಿಸಬೇಕು, ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದ ವರದಿಯೊಂದನ್ನು ಉಲ್ಲೇಖ ಮಾಡಿ ತನ್ನ ಅಧಿಕೃತ ಖಾತೆಯ ಮೂಲಕ ಟ್ವೀಟ್ ಮಾಡಿರುವ ಕಾಂಗ್ರೆಸ್, ''ತನ್ನ ಮನೆಯೊಳಗಣ ಕಿಚ್ಚು ತನ್ನ ಮನೆಯ ಸುಡುವುದಲ್ಲದೆ ನೆರೆಮನೆಯ ಸುಡುವುದೆ ಕೂಡಲಸಂಗಮದೇವಾ. ಶರಣರ ಈ ಮಾತಿನಂತೆ, ಸಮನ್ವಯತೆ ಇಲ್ಲದ ಈ ಸರ್ಕಾರದೊಳಗಿನ ಕಿಚ್ಚು ರಾಜ್ಯದ ಅಭಿವೃದ್ಧಿ, ಹಿತಕ್ಕೆ ಮಾರಕವಾಗಿ ಪರಿಣಮಿಸಿದೆ. ಕರ್ನಾಟಕ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ಪ್ರತಿಷ್ಠೆ, ಅಧಿಕಾರದ ಕಿತ್ತಾಟದಲ್ಲಿ ಕಾಲ ಕಳೆಯುತ್ತಾ ರಾಜ್ಯದ ಹಿತ ಮರೆತಿದೆ'' ಎಂದು ದೂರಿದೆ.