ನವದೆಹಲಿ, ಫೆ.10 (DaijiworldNews/PY): ದಿನಕ್ಕೆ 8 ತಾಸಿನಂತೆ ವಾರದ ಆರು ದಿನಕ್ಕೆ ಕೆಲಸಕ್ಕೆ ಬದಲಾಗಿ ದಿನಕ್ಕೆ 12 ತಾಸಿನಂತೆ ವಾರಕ್ಕೆ ನಾಲ್ಕೇ ದಿನ ಕೆಲಸ ಮಾಡಲು ಅವಕಾಶ ಕಲ್ಪಿಸುವ ಕಾನೂನನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಮಾಹಿತಿ ನೀಡಿರುವ ಕಾರ್ಮಿಕ ಸಚಿವಾಲಯ ಕಾರ್ಯದರ್ಶಿ ಅಪೂರ್ವ ಚಂದ್ರ, "ಕೆಲಸದ ದಿನಗಳಲ್ಲಿನ ಒತ್ತಡವನ್ನು ಸಡಿಲಗೊಳಿಸಲು ಯತ್ನಿಸಲಾಗುತ್ತಿದೆ. ವಾರದಲ್ಲಿ 4 ದಿನಗಳ ಕೆಲಸಕ್ಕೆ ಕೆಲ ಕಂಪೆನಿಗಳು ಸಮ್ಮಿತಿಸಿವೆ. ಇನ್ನು ಕೆಲ ಸಂಸ್ಥೆಗಳು ವಾರದಲ್ಲಿ 5 ದಿನಗಳ ಕೆಲಸಕ್ಕೆ ಸಮ್ಮತಿ ನೀಡಿವೆ" ಎಂದು ತಿಳಿಸಿದ್ದಾರೆ.
"ವಿವಿಧ ರಾಜ್ಯಗಳಿಂದ ಈ ಬಗೆಗಿನ ಕರಡಿನ ಕುರಿತು ಜನವರಿಯಲ್ಲಿ ಅಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು. ಇದೀಗ ಕಾರ್ಮಿಕ ನೀತಿಗಳಿಗೆ ಅಂತಿಮ ರೂಪ ನೀಡಲಾಗುತ್ತಿದೆ. ನೂತನ ನೀತಿಗಳ ಬಗ್ಗೆ ವಿವಿಧ ರಾಜ್ಯಗಳ ಜೊತೆ ಮಾತುಕತೆ ನಡೆಸಲಾಗಿದೆ. ಫೆ.10ರೊಳಗೆ ಪಂಜಾಬ್ ಸೇರಿದಂತೆ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಂತಹ ರಾಜ್ಯಗಳು ತಮ್ಮ ಅಭಿಪ್ರಾಯ ಸಲ್ಲಿಸಲಿವೆ" ಎಂದಿದ್ದಾರೆ.
ಹೊಸ ಕಾರ್ಮಿ ಸಂಹಿತೆ ಜಾರಿ ಸಲುವಾಗಿ ಕೇಂದ್ರ ಕಾರ್ಮಿಕ ಸಚಿವಾಲಯ ಕಾರ್ಯಪ್ರವೃತ್ತವಾಗಿದ್ದು, ಇದರ ಪ್ರಕಾರ ಕಂಪೆನಿಗಳು ನೌಕರರ ಕೆಸದ ದಿನವನ್ನು ವಾರಕ್ಕೆ ನಾಲ್ಕು ದಿನಗಳಿಗೆ ಇಳಿಸುವ ಅವಕಾಶ ನೀಡಲಾಗಿದ್ದು, ಆದರೆ, ಕರ್ತವ್ಯದ ವರದಿ ವಾರದಲ್ಲಿ 48 ಗಂಟೆ ಹಾಗೇ ಇರಲಿದೆ ಎನ್ನಲಾಗಿದೆ.