ಲಕ್ನೋ, ಫೆ.10 (DaijiworldNews/MB) : ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ನಿರ್ಮಾಣಕ್ಕಾಗಿ ದೇಶದಲ್ಲಿ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದೆ. ಏತನ್ಮಧ್ಯೆ ಕಾಂಗ್ರೆಸ್ ನಾಯಕಿಯೊಬ್ಬರು 51 ಲಕ್ಷ ದೇಣಿಗೆಯನ್ನು ನೀಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಉತ್ತರ ಪ್ರದೇಶದ ರಾಯ್ ಬರೇಲಿ ಕಾಂಗ್ರೆಸ್ ಶಾಸಕಿ ಆದಿತಿ ಸಿಂಗ್ ಅವರು 51 ಲಕ್ಷ ಹಣವನ್ನು ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆಯಾಗಿ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಜ್ ಅವರಿಗೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶಾಸಕಿ, ''ಸರ್ವಶಕ್ತನ ಕೃಪೆಯಿಂದ ನನ್ನ ತಂಡ ಮತ್ತು ನಾನು ನಮ್ಮ ರಾಮ ಮಂದಿರ ನಿರ್ಮಾಣಕ್ಕಾಗಿ 51,00,000 ಮೊತ್ತವನ್ನು ನೀಡಿದ್ದೇನೆ. ಅಮೂಲ್ಯವಾದ ಸಮಯವನ್ನು ವಿನಿಯೋಗಿಸಿ ರಾಯ್ ಬರೇಲಿಗೆ ಬಂದಿದ್ದಕ್ಕಾಗಿ ನಾನು ಚಂಪತ್ ರಾಯ್ ಜಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ'' ಎಂದು ಹೇಳಿದ್ದಾರೆ.
ಶಾಸಕಿ ಆದಿತಿ ಸಿಂಗ್ ಅವರು ಈ ಹಿಂದೆ ತಾನಿರುವ ಕಾಂಗ್ರೆಸ್ ಪಕ್ಷದ ವಿರುದ್ದವೇ ಆಕ್ರೋಶ ವ್ಯಕ್ತಪಡಿಸಿದ್ದರು. ಸೋನಿಯಾ ಗಾಂಧಿ ವಿರುದ್ಧವೇ ಗುಡುಗಿದ್ದರು.